ಸಂಪುಟ ಸರ್ಜರಿಯ ಬಿಎಸ್‍ವೈ `ಅಮಿತ’ ಆಸೆಗೆ `ಹೈ’ ಕೊಕ್ಕೆ – ದೆಹಲಿಯಲ್ಲಿ ಇಂದು ಏನಾಯ್ತು?

Public TV
2 Min Read

– ಮೂರನೇ ದೆಹಲಿ `ದಂಡಯಾತ್ರೆ’ಯಲ್ಲೂ ಸಿಎಂಗೆ ನಿರಾಸೆ
– ಹೈಕಮಾಂಡ್ ಜೊತೆ ಇದೇ ಲಾಸ್ಟ್ ಮೀಟಿಂಗ್

ನವದೆಹಲಿ/ವಿಜಯಪುರ: ಸಚಿವ ಸಂಪುಟದ ಸರ್ಜರಿ ಸಿಎಂ ಪರಮಾಧಿಕಾರಿ ಎನ್ನುತ್ತಾರೆ ಕಂಡ ಕಂಡ ಬಿಜೆಪಿ ನಾಯಕರು. ಆದರೆ ಇವತ್ತಿನವರೆಗೂ ಅದು ಕೇವಲ ಬಾಯ್ಮಾತಿಗೆ ಸೀಮಿತ ಆದಂತಿದೆ. ಸಂಭಾವ್ಯ ಸಚಿವರ ಪಟ್ಟಿ ಹಿಡಿದು ಮೂರನೇ ಬಾರಿ ದೆಹಲಿ ದಂಡಯಾತ್ರೆ ನಡೆಸಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಸಚಿವ ಸಂಪುಟ ವಿಸ್ತರಣೆ ಯಾವಾಗ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದು ಕೂಡ ಉತ್ತರ ಸಿಕ್ಕಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ದೆಹಲಿಯಿಂದ ರಾತ್ರಿ ಫ್ಲೈಟ್ ಹತ್ತಿ ಬೆಂಗಳೂರಿಗೆ ಧಾವಿಸಿದ್ದಾರೆ.

ಅಮಿತ್ ಶಾ ಬುಲಾವ್ ಮೇರೆಗೆ ಇಂದು ಬೆಳ್ಳಂಬೆಳಗ್ಗೆ ಪುತ್ರ ವಿಜಯೇಂದ್ರ ಜೊತೆಗೆ ದೆಹಲಿಗೆ ತೆರಳಿದ ಯಡಿಯೂರಪ್ಪಗೆ ಹೈಕಮಾಂಡ್ ಅಪಾಯಂಟ್‍ಮೆಂಟ್ ಸಿಕ್ಕಿದ್ದು ಮಧ್ಯಾಹ್ನ 3 ಗಂಟೆ ಹೊತ್ತಿಗೆ. ಕೇಂದ್ರ ಗೃಹ ಮಂತ್ರಿ ಮನೆಗೆ ತೆರಳಿದ ಸಿಎಂ ಬಿಎಸ್‍ವೈ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆಗೆ ಒಂದು ಗಂಟೆ ಕಾಲ ಚರ್ಚೆ ನಡೆಸಿದರು.

ಸಂಪುಟ ಸರ್ಜರಿ ಸಂಬಂಧ ಸುಧೀರ್ಘ ಚರ್ಚೆ ನಡೆಯಿತು. ಬಿಎಸ್‍ವೈ ತಾವು ತೆಗೆದುಕೊಂಡು ಹೋಗಿದ್ದ ಸಂಭಾವ್ಯರ ಪಟ್ಟಿಯನ್ನು ಮುಂದಿಟ್ಟು, ಉಪ ಚುನಾವಣೆಗಳು ಹತ್ತಿರ ಇದೆ. ವಲಸಿಗರಿಗೆ ಕೊಟ್ಟ ವಚನ ಈಡೇರಿಸಬೇಕಿದೆ. ಸಂಪುಟ ವಿಸ್ತರಣೆಗಾದ್ರೂ ಸರಿ, ಪುನಾರಚನೆಗಾದರೂ ಸರಿ. ಅನುಮತಿ ನೀಡಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ರು. ಎಲ್ಲವನ್ನು ಕೇಳಿದ ಹೈಕಮಾಂಡ್ ನಾಯಕರು, ಆಯ್ತು ನೀವು ಹೊರಡಿ. ನಾವು ತಿಳಿಸ್ತೀವಿ ಎಂಬ ರೆಡಿಮೇಡ್ ಉತ್ತರ ಕೊಟ್ಟು ಯಡಿಯೂರಪ್ಪರನ್ನು ಕಳಿಸಿದ್ರು. ಇದ್ರಿಂದ ತೀವ್ರವಾಗಿ ಅಸಮಾಧಾನಗೊಂಡ ಯಡಿಯೂರಪ್ಪ, ಮಾಧ್ಯಮಗಳ ಜೊತೆ ಮಾತನಾಡದೇ ಜೆಪಿ ನಡ್ಡಾ ನಿವಾಸದಿಂದ ನಿರ್ಗಮಿಸಿದ್ರು.

ಲಾಸ್ಟ್ ಮೀಟಿಂಗ್: ಅಮಿತ್ ಶಾ ನಿವಾಸದಿಂದ ನೇರ ಕರ್ನಾಟಕ ಭವನಕ್ಕೆ ತೆರಳಿದ ಸಿಎಂ ಯಡಿಯೂರಪ್ಪ, ತಮ್ಮ ಪುತ್ರ ವಿಜಯೇಂದ್ರ ಜೊತೆಗೆ ಚರ್ಚೆ ನಡೆಸಿದ ಸ್ವಲ್ಪ ಹೊತ್ತಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ರು. ಇವತ್ತಿನ ಸಭೆ ನನಗೆ ಸಮಾಧಾನ, ತೃಪ್ತಿ ತಂದಿದೆ. ಸಂತೋಷ ತಂದಿದೆ ಎಂದರು. ಆದರೆ ಸಂಪುಟ ಸರ್ಜರಿ ಯಾವಾಗ? ಸಂಪುಟ ವಿಸ್ತರಣೆಯೋ? ಪುನಾರಚನೆಯೋ ಎಂಬ ಪ್ರಶ್ನೆಗೆ ಅವರು ತಿಳಿಸಿದ ತಕ್ಷಣ ಗೊತ್ತಾಗುತ್ತೆ. ಶೀಘ್ರವೇ ಸಿಹಿಸುದ್ದಿ ಸಿಗಲಿದೆ. ಸಂಪುಟ ಸಂಬಂಧ ಇದೇ ಲಾಸ್ಟ್ ಮೀಟಿಂಗ್ ಎಂದು ಸ್ಪಷ್ಟಪಡಿಸಿದರು.

ಈ ಮಧ್ಯೆ, ನಾಯಕತ್ವ ಬದಲಾವಣೆ ಬಗ್ಗೆಯೂ ಹೈಕಮಾಂಡ್ ಚರ್ಚೆ ನಡೆಸಿದೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರ ನೀಡಲು ಯಡಿಯೂರಪ್ಪ ನಿರಾಕರಿಸಿದ್ರು. ಮುಂದೆಯೂ ನೀವೆ ಸಿಎಂ ಆಗಿ ಮುಂದುವರೆಯುತ್ತೀರಾ ಎಂಬ ಪ್ರಶ್ನೆಗೆ ನೀವೇ ಉತ್ತರಿಸಿ ಎಂದು ಮಾಧ್ಯಮದವರನ್ನು ಕೇಳಿದ್ರು.

ಈ ಬೆಳವಣಿಗೆಗೆ ಪೂರಕ ಎಂಬಂತೆ, ಇದಕ್ಕೆ ಮುನ್ನ ವಿಜಯಪುರದಲ್ಲಿ ಮಾತನಾಡಿದ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಸಂಪುಟ ವಿಸ್ತರಣೆ ಆಗುತ್ತೋ? ಪುನರ್ ರಚನೆ ಆಗುತ್ತೋ ಗೊತ್ತಿಲ್ಲ. ಆದ್ರೇ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಅಮಿತ್ ಷಾ ಕರೆಯಿಸಿಕೊಂಡಿದ್ದಾರೆ ಎಂದು ನನಗೆ ಎನಿಸುತ್ತೆ ಎಂದಿದ್ದಾರೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಸಂಪುಟ ಸರ್ಜರಿ ನಡೆಯಬಹುದು ಎನ್ನಲಾಗುತ್ತಿದೆ. ಆದರೆ ಯಾವುದು ಕೂಡ ಸ್ಪಷ್ಟ ಇಲ್ಲ. ಇದ್ರಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ನಿರಾಸೆಗೊಂಡಿದ್ದಾರೆ. ಸದ್ಯದ ಬೆಳವಣಿಗೆ ಗಮನಿಸಿದರೆ ಬಿಜೆಪಿಯಲ್ಲಿ ಏನೋ ನಡೆಯುತ್ತಿದೆ ಎನ್ನುವುದಂತೂ ಸ್ಪಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *