ಮಂಡ್ಯ: ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲದಯಲ್ಲಿ ಕೃಷ್ಣರಾಜಮುಡಿ ಮಹೋತ್ಸವ ಸಂಡೆ ಲಾಕ್‍ಡೌನ್ ನಡುವೆ ಅತ್ಯಂತ ಸರಳವಾಗಿ ನಡೆಯಿತು.
ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವನಾರಾಯಣನಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ತೊಡಿಸಿ ಅಲಂಕಾರ ಮಾಡಲಾಗಿತ್ತು. ರಾತ್ರಿ 7ಗಂಟೆಯಲ್ಲಿ ಮಹಾಮಂಳಾರತಿ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರತೀ ವರ್ಷ ರಾಜಬೀದಿಯಲ್ಲಿ ಉತ್ಸವದ ಮೆರವಣಿಗೆ ಸಾಗುತ್ತಿತ್ತು. ಈ ಬಾರಿ ಲಾಕ್‍ಡೌನ್ ಇರುವುದರಿಂದ ದೇವಾಲಯದ ಒಳಪ್ರಾಂಗಣದಲ್ಲೇ ಉತ್ಸವ ಮಾಡಲಾಯಿತು. ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ಇರಲಿಲ್ಲ.
ಪ್ರತಿ ವರ್ಷ ಉತ್ಸವದ ದಿನದಂದು ಜಿಲ್ಲಾ ಖಜಾನೆಯಿಂದ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟವನ್ನು ದೇವಾಲಯಕ್ಕೆ ನೀಡಲಾಗುತ್ತಿತ್ತು. ಈಬಾರಿ ನೂರಾರು ವರ್ಷಗಳ ಸಂಪ್ರದಾಯ ಮುರಿದು ಒಂದು ದಿನ ಮುಂಚಿತವಾಗಿಯೇ ಕಿರೀಟ ಹಸ್ತಾಂತರಿಸಲಾಗಿತ್ತು. ಪರ್ಕಾವಣೆ ವೇಳೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು. ಕೋವಿಡ್-19 ಮಾರ್ಗಸೂಚಿಯಂತೆ 60 ವರ್ಷ ಮೇಲ್ಪಟ್ಟವರಿಗೆ ದೇಗುಲಗಳ ಪ್ರವೇಶ ಮಾಡುವಂತಿಲ್ಲ. ಆದರೆ ಉತ್ಸವದಲ್ಲಿ ಭಾಗಿಯಾಗಿದ್ದ ಸ್ಥಾನಿಕರಲ್ಲಿ 60 ವರ್ಷ ಮೇಲ್ಪಟ್ಟವರೇ ಆದ್ದರು.
ಐತಿಹಾಸಿಕ ವೈರಮುಡಿ ಉತ್ಸವ ಮುಂದೂಡಿದ್ದ ಮಂಡ್ಯ ಜಿಲ್ಲಾಡಳಿತ, ಲಾಕ್‍ಡೌನ್ ಇದ್ದರೂ ಕೃಷ್ಣರಾಜ ಮುಡಿ ಉತ್ಸವಕ್ಕೆ ಅವಕಾಶ ಕೊಟ್ಟಿದ್ದು ಹೇಗೆ? ವಜ್ರಾಂಗಿ ಆಭರಣ ಕಳವು ವಿಚಾರ ಕೋರ್ಟ್ ನಲ್ಲಿದ್ದರೂ ಒಂದು ದಿನ ಮುಂಚಿತವಾಗಿ ಕೋಟ್ಯಂತರ ಬೆಲೆ ಬಾಳುವ ಕಿರೀಟವನ್ನು ಹಸ್ತಾಂತರಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಇದೀಗ ಹಲವರು ಕೇಳುತ್ತಿದ್ದಾರೆ.