ಸಂಚಾರಿ ವಿಜಯ್ ಇದ್ದಿದ್ರೆ ಯಾವ ಸಿನಿಮಾಗಳಲ್ಲಿ, ಯಾವ್ಯಾವ ಅವತಾರದಲ್ಲಿ ಕಾಣಿಸಿಕೊಳ್ತಿದ್ರು?

Public TV
3 Min Read

ಬೆಂಗಳೂರು: ಸಂಚಾರಿ ವಿಜಯ್ ತಮ್ಮ ವಿಭಿನ್ನ ನಟನೆ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹೆಗ್ಗಳಿಕೆ ಅವರದು. ಅದೇ ರೀತಿ ತಮ್ಮ ಮುಂದಿನ ಸಿನಿಮಾಗಳಲ್ಲಿ ಸಹ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಸುಮಾರು 5 ಚಿತ್ರಗಳು ಅವರ ಕೈಯ್ಯಲ್ಲಿದ್ದವು, ಎಲ್ಲವೂ ಮೈ ಜುಮ್ ಎನ್ನಿಸುವ ಪಾತ್ರಗಳೇ ಎಂಬುದು ವಿಶೇಷ. ಇದಕ್ಕೆ ಉದಾಹರಣೆ ಎಂಬಂತೆ ಅವರ ಅಂತ್ಯಕ್ರಿಯೆ ದಿನದಂದು ಬಿಡುಗಡೆಯಾದ ತಲೆದಂಡ ಸಿನಿಮಾದ ಅದ್ಭುತ ಟ್ರೈಲರ್.

ಹೌದು ಈ ಹಿಂದೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದ ಸಂಚಾರಿ ವಿಜಯ್, ಲಾಕ್‍ಡೌನ್ ಬಳಿಕ ಎರಡು ಸಿನಿಮಾಗಳ ಚಿತ್ರೀಕರಣ ಆರಂಭವಾಗಬೇಕಿದೆ. ಅಲ್ಲದೆ ಮೇಲೊಬ್ಬ ಮಾಯಾವಿ, ಪುಕ್ಸಟ್ಟೆ ಲೈಫು ಹಾಗೂ ತಲೆದಂಡ ಮೂರು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಮೂರೂ ಸಿನಿಮಾಗಳು ಸಾಮಾಜಿಕ ಕಳಕಳಿ ಹೊಂದಿವೆ. ಒಂದು ಗ್ಲೋಬಲ್ ವಾರ್ಮಿಂಗ್ ಕುರಿತು, ಮತ್ತೊಂದು ಡಾರ್ಕ್ ಕಾಮಿಡಿ ಕುರಿತದ್ದಾಗಿದೆ. ಈ ಎಲ್ಲ ಸಿನಿಮಾಗಳನ್ನು ಕಳೆದ ವರ್ಷವೇ ಬಿಡುಗಡೆ ಮಾಡಲು ಉದ್ದೇಶಿಸಿದ್ದೆವು. ಅಲ್ಲದೆ ಇನ್ನೂ ಉತ್ತಮ ಸಿನಿಮಾಗಳನ್ನು ಮಾಡುವ ಕುರಿತು ಯೋಜನೆ ಇದೆ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಆಪ್ತಮಿತ್ರನ ಕಳೆದುಕೊಂಡ ದುಃಖ- ನೀನಾಸಂ ಸತೀಶ್ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್

ಬಿ.ನವೀನ್ ಕೃಷ್ಣ ನಿರ್ದೇಶನದ ಮೇಲೊಬ್ಬ ಮಾಯಾವಿ ಚಿತ್ರದಲ್ಲಿ ಇರುವೆ ಹೆಸರಿನ ವ್ಯಕ್ತಿಯ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಕರಾವಳಿ ಪ್ರದೇಶದಲ್ಲಿನ ಅಕ್ರಮ ಮರಳುಗಾರಿಕೆ ಕುರಿತು ಬೆಳಕು ಚೆಲ್ಲುವುದಾಗಿದೆ. ಹಿಂದೆಂದೂ ಕಾಣಿಸದ ರೀತಿಯ ಪಾತ್ರದಲ್ಲಿ ವಿಜಯ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸಂಚಾರಿ ವಿಜಯ್ ಹೆಸರಲ್ಲಿ ಗಿಣಿ ದತ್ತು ಪಡೆದ ಬಿಗ್‍ಬಾಸ್ ಸ್ಪರ್ಧಿ ಚಂದ್ರಚೂಡ್

ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡ ಸಿನಿಮಾದಲ್ಲಿ ವಿಜಯ್ ಬುದ್ಧಿಮಾಂದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈತ ಕಾಡಿನಲ್ಲೇ ವಾಸವಿದ್ದು, ಮರಗಳ ಹಾಗೂ ಪರಿಸರದ ಉಳಿವಿಗಾಗಿ ಹೋರಾಡುತ್ತಿರುತ್ತಾನೆ. ಅಲ್ಲದೆ ಟಿಂಬರ್ ಮಾಫಿಯಾ ವಿರುದ್ಧ ಸೆಟೆದು ನಿಂತಿರುತ್ತಾನೆ. ಈ ಪಾತ್ರದಲ್ಲಿ ಸಂಚಾರಿ ವಿಜಯ್ ನಟನೆ ಅದ್ಭುತವಾಗಿದೆ. ಇತ್ತೀಚೆಗೆ ಇದರ ಟ್ರೈಲರ್ ಸಹ ಬಿಡುಗಡೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

ಅರವಿಂದ್ ಕುಪ್ಳಿಕರ್ ನಿರ್ದೇಶನದ ಪುಕ್ಸಟ್ಟೆ ಲೈಫು ಸಿನಿಮಾ ಸಹ ತೆರೆಗಪ್ಪಳಿಸಲು ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಸಂಚಾರಿ ವಿಜಯ್ ಕೀ ಮಾರುವ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಕ್‍ಡೌನ್‍ಗೂ ಮೊದಲೇ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗಿದೆ.

ಪಿರಂಗಿಪುರ ಸಿನಿಮಾ ಚಿತ್ರೀಕರಣ ಕೇವಲ ಶೇ.40ರಷ್ಟು ಮುಗಿದಿದ್ದು, ಇನ್ನೂ ಶೇ.60 ರಷ್ಟು ಶೂಟಿಂಗ್ ಬಾಕಿ ಇದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಆ್ಯಂಗ್ರಿ ಓಲ್ಡ್ ಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪಿರಂಗಿಪುರ ಎಂಬ ಕಾಲ್ಪನಿಕ ಪಟ್ಟಣವನ್ನು ಕಟ್ಟುವಲ್ಲಿ ಈ ವೃದ್ಧ ಶ್ರಮಿಸುತ್ತಿರುತ್ತಾನೆ. ಸುಮಾರು 2,000 ವರ್ಷಗಳ ಹಿಂದಿನ ವಾತಾವರಣಕ್ಕೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಅಲ್ಲದೆ ಹೆಚ್ಚು ಪ್ರಾಸ್ಥೆಟಿಕ್ ಮೇಕ್‍ಅಪ್ ಬಳಸಲಾಗಿದೆ. ಬಜೆಟ್ ಕಾರಣದಿಂದಾಗಿ 2018ರಿಂದ ಸಿನಿಮಾ ನಿರ್ಮಾಣವನ್ನು ಮುಂದೂಡಿದ್ದೆವು ಎಂದು ನಿರ್ದೇಶಕ ಜನಾರ್ಧನ್.ಪಿ ಮಾಹಿತಿ ನೀಡಿದ್ದಾರೆ.

ಈ ಎಲ್ಲ ಚಿತ್ರಗಳ ಹೊರತಾಗಿ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಅವರ ಜೊತೆ ನಟಿಸಲು ಸಂಚಾರಿ ವಿಜಯ್ ಅವಸ್ತಾಂತರ ಸಿನಿಮಾಗೆ ಸಹಿ ಹಾಕಿದ್ದರು, ಫೋಟೋ ಶೂಟ್ ಸಹ ನಡೆದಿತ್ತು. ಲಾಕ್‍ಡೌನ್ ಬಳಿಕ ಇನ್ನೇನು ಚಿತ್ರೀಕರಣ ಪ್ರಾರಂಭಿಸಬೇಕಿತ್ತು. ಆದರೆ ವಿಧಿಯಾಟಕ್ಕೆ ಸಂಚಾರಿ ವಿಜಯ್ ಬಲಿಯಾದರು. ಈ ಚಿತ್ರದಲ್ಲಿ ವಿಜಯ್ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಸಿ, ಎರಡು ಪದವಿ ಪಡೆದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸುತ್ತಿದ್ದರು ಎಂದು ನಿರ್ದೇಶಕ ಜಿ.ದೀಪಕ್ ಕುಮಾರ್ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *