ಸಂಕ್ರಾಂತಿ ಹಬ್ಬಕ್ಕೆ ಅಂಗರಕ್ಷಕಗೆ ಭರ್ಜರಿ ಗಿಫ್ಟ್ ನೀಡಿದ ಕಿಚ್ಚ

Public TV
2 Min Read

ಬೆಂಗಳೂರು: ಕಿಚ್ಚ ಸುದೀಪ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ವ್ಯಕ್ತಿ ಎಂಬುದು ತಿಳಿದ ವಿಚಾರ. ಅಲ್ಲದೆ ಈಗಾಗಲೇ ಅವರು ಹಲವರಿಗೆ ವಿವಿಧ ರೀತಿಯ ಸಹಾಯವನ್ನು ಮಾಡಿದ್ದಾರೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದಾರೆ ಸಹ. ಇದೀಗ ತಮ್ಮ ಅಂಗರಕ್ಷಕ (ಬಾಡಿಗಾರ್ಡ್)ಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ಹೌದು ಕುಟುಂಬ, ಸ್ನೇಹಿತರು ಹಾಗೂ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಸುದೀಪ್, ತಮ್ಮ ಬಾಡಿಗಾರ್ಡ್‍ಗೆ ಗಿಫ್ಟ್ ನೀಡಿ ಗಮನಸೆಳೆದಿದ್ದಾರೆ. ಕುಟಂಬದವರೊಂದಿಗೆ ಹೆಚ್ಚು ಕಾಲ ಕಳೆಯುವ ಕಿಚ್ಚ, ತಮ್ಮ ಸಿಬ್ಬಂದಿಯನ್ನೂ ಅಷ್ಟೇ ಪ್ರೀತಿಸುತ್ತಾರೆ. ಹಲವು ವರ್ಷಗಳಿಂದ ತಮ್ಮ ಜೊತೆ ಕೆಲಸ ಮಾಡುತ್ತಿರುವ ಬಾಡಿಗಾರ್ಡ್ ಸಾಯಿ ಕಿರಣ್‍ಗೆ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಬುಲೆಟ್ ಬೈಕ್ ಗಿಫ್ಟ್ ನೀಡಿದ್ದಾರೆ.

ಸಾಯಿ ಕಿರಣ್ ಅವರು ಕಿಚ್ಚ ಕಿರಣ್ ಎಂದೇ ಪ್ರಸಿದ್ಧರು. ಇದೀಗ ಅವರಿಗೆ ಇಷ್ಟವಾದ ಕಪ್ಪು ಬಣ್ಣದ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಸಾಯಿ ಕಿರಣ್ ಫುಲ್ ಖುಷಿಯಾಗಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡಿರುವ ಸಾಯಿ ಕಿರಣ್, ಕಿಚ್ಚ ಸುದೀಪ್ ಅವರು ಬುಲೆಟ್ ಬೈಕ್ ಗಿಫ್ಟ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ. ಇದರಿಂದ ಖುಷಿ ಹಾಗೂ ಆಶ್ಚರ್ಯವಾಗಿದೆ. ಮೊದಲು ಕಿಚ್ಚ ಸುದೀಪ್ ಅವರನ್ನೇ ಹತ್ತಿಸಿಕೊಂಡು ಹೋಗುತ್ತೇನೆ. ಸುದೀಪ್ ಮೊದಲ ಸಿನಿಮಾ ಸ್ಪರ್ಷದಿಂದಲೂ ಅವರ ದೊಡ್ಡ ಅಭಿಮಾನಿ, ಕಳೆದ ಆರು ವರ್ಷಗಳಿಂದ ಸುದೀಪ್ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಚಿರಋಣಿಯಾಗಿದ್ದೇನೆ ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಅವರ ಅಭಿಮಾನಿಯ ಸ್ಥಿತಿ ಕಂಡು ಕೃತಕ ಕಾಲು ಜೋಡಣೆಗೆ ಸ್ಥಳದಲ್ಲೇ ಸಹಾಯ ಮಾಡಿದ್ದರು. ಈ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇವಲ ಇದು ಮಾತ್ರವಲ್ಲ ನೆರೆ ಪರಿಹಾರ, ಶಾಲಾ ಶುಲ್ಕ, ವಿವಾಹ ಹಾಗೂ ಸರ್ಕಾರಿ ಶಾಲೆ ದತ್ತು ಪಡೆಯುವುದು ಸೇರಿದಂತೆ ಹತ್ತು ಹಲವು ರೀತಿಯ ಸಹಾಯಗಳನ್ನು ಕೋಟಿಗೊಬ್ಬ ಮಾಡುತ್ತಿದ್ದಾರೆ.

ಸುದೀಪ್ ಅವರ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಕೊನೇ ಭಾಗದ ಚಿತ್ರೀಕರಣವನ್ನು ಕೇರಳದಲ್ಲಿ ನಡೆಸಲಾಗುತ್ತಿದೆ. ಅಲ್ಲದೆ ಇದರ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕಬ್ಜ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *