ಶ್ರೀ ರಾಮ ಕೋಟಿ ಬರೆದು ಅಯೋಧ್ಯೆಗೆ ಕಳುಹಿಸಲು ಮುಂದಾದ ಮುಸ್ಲಿಂ ನಿವೃತ್ತ ಶಿಕ್ಷಕ

Public TV
2 Min Read

ಕೋಲಾರ: ಆತನದ್ದು ಧರ್ಮಕ್ಕೂ ಮಿಗಿಲಾದ ಭಕ್ತಿ, ಆತನ ಧಾರ್ಮಿಕ ಚಿಂತನೆ ಅದೆಷ್ಟೋ ಜನರಿಗೆ ಸ್ಫೂರ್ತಿ. ಮುಸ್ಲಿಂ ರಾಮ ಭಕ್ತನೊರ್ವ ಶ್ರೀರಾಮ ಕೋಟಿ ಬರೆಯುತ್ತಾ, ಶ್ರೀರಾಮನ ಜಪದಿಂದಲೇ ತಮ್ಮ ಜೀವನದ ಅಂತ್ಯಕ್ಕೆ ಬಂದು ಸೇರಿದ್ದಾರೆ.

ಶ್ರೀರಾಮಕೋಟಿ ಬರೆಯುತ್ತಿರುವ ಶ್ರೀರಾಮನ ವೃದ್ಧ ಭಕ್ತ, ಶ್ರೀರಾಮಕೋಟಿ ಬರೆದು ಭದ್ರಾಚಲಂ, ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮ ದೇಗುಲಕ್ಕೆ ಅರ್ಪಿಸುವ ಕನಸು ಹೊತ್ತಿರುವ 96 ವರ್ಷದ ಮುಸ್ಲಿಂ ಧರ್ಮದ ಪಾಚಾಸಾಭ್.

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿ 1923 ರಲ್ಲಿ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಅವತ್ತಿಗೆ ಕನ್ನಡದಲ್ಲಿ 8ನೇ ತರಗತಿವರೆಗೆ ಹಾಗೂ 4ನೇ ತರಗತಿಯನ್ನು ಇಂಗ್ಲೀಷ್ ಭಾಷೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಹಿಂದೂಗಳ ಆರಾದ್ಯ ದೈವ ಕಲಿಯುಗದ ಮಹಾ ಪುರುಷ ಶ್ರೀರಾಮನ ಜಪ ಮಾಡುತ್ತಾ, ರಾಮನಿಗೆ ತಮ್ಮ ಭಕ್ತಿಯನ್ನ ಸಮರ್ಪಣೆ ಮಾಡುತ್ತಿದ್ದಾರೆ. ನಿವೃತ್ತಿಯಾದ ಬಳಿಕ ಪಿಂಚಣಿಯಲ್ಲಿ ಶ್ರೀರಾಮಕೋಟಿ ಬರೆದುಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಶಿಕ್ಷಕರಾಗಿದ್ದಾಗ 22 ವರ್ಷಗಳ ಹಿಂದೆ ಸ್ನೇಹಿತನೊಂದಿಗೆ ಭದ್ರಚಲಂ ದೇವಾಲಯಕ್ಕೆ ಹೋಗಿದ್ದಾಗ ಅಲ್ಲಿ ಒಬ್ಬ ಸಾಧು ಶ್ರೀರಾಮ ಕೋಟಿ ಬರೆಯುತ್ತಿದ್ದನ್ನು ಕಂಡು ವಿಚಾರಿಸಿದ ಇವರು ಹಾಗೆ ಬರೆದಲ್ಲಿ ನಿನಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಅಂದಿನಿಂದ ನಾನು ಸಹ ಶ್ರೀರಾಮ ಕೋಟಿ ಬರೆಯುವುದನ್ನು ಪ್ರಾರಂಭಿಸಿ, ಪುಸ್ತಕದಲ್ಲಿ ಬರೆಯುವುದರ ಜೊತೆಗೆ ಎಕ್ಕದ ಎಲೆ, ಆಲದ ಎಲೆ, ಕಂಚಿನ ಎಲೆಯ ಮೇಲೂ ಶ್ರೀರಾಮ ಕೋಟಿ ಬರೆಯುತ್ತಿದ್ದಾರೆ. ಈಗ ಒಟ್ಟು 1 ಕೋಟಿ ಬರೆದಿದ್ದಾರೆ, ಅಕ್ಟೋಬರ್ 15ಕ್ಕೆ 1 ಕೋಟೆ ರಾಮಕೋಟೆಯನ್ನು ಬರೆದು ಮುಗಿಸಿದ್ದಾರೆ. ಇನ್ನು ರಾಮಕೋಟೆಯನ್ನು ಭದ್ರಚಲಂಗೆ ಅಥವಾ ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಅಯೋಧ್ಯೆಗೆ ಯಾರಾದರೂ ಜನಪ್ರತಿನಿಧಿಗಳ ಕೈಯಲ್ಲಿ ಅರ್ಪಿಸುವ ಕನಸು ಇವರದ್ದು.

ಸರ್ವಧರ್ಮ ಸಮನ್ವಯ ಸಾರುವುದೇ ನನ್ನ ಗುರಿಯಾಗಿದೆ ಈ ಗ್ರಾಮದಲ್ಲಿ ಒಂದು ರಾಮಾಂಜನೇಯ ದೇವಾಲಯ ನಿರ್ಮಾಣ ಮಾಡುವ ಕನಸು ಇದೆ. ಪಾಚಾಸಾಭ್ ಗಾಂಧೀಜಿ, ನೆಹರು, ಇಂದಿರಾಗಾಂದಿ, ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ, ರವರೊಂದಿಗೆ ಒಡನಾಡಿಗಳಾಗಿದ್ದವರು. ಕೆ.ಸಿ.ರೆಡ್ಡಿ ಅವಧಿಯಲ್ಲಿ ಎಲ್ಲೆಡೆ ಮತ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟವರಾಗಿದ್ದು, ಗೋವಾ ಲೋಕಾಸೇವಾದಿಂದ ನಡೆದ ಗೋವಾ ಸತ್ಯಾಗ್ರಹದಲ್ಲಿ ಕೃಷ್ಣಯ್ಯಶೆಟ್ಟಿರವರ ನೇತೃತ್ವದಲ್ಲಿ ಸ್ವಾತಂತ್ರಕ್ಕೆ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು, ಅದರ ಸವಿ-ನೆನಪುಗಳನ್ನು ಇಂದಿಗೂ ಹಂಚಿಕೊಳ್ಳುತ್ತಾರೆ. ಜೀವನದಲ್ಲಿ ನೆಮ್ಮದಿ ಸಿಕ್ಕಿದೆ, ಆರೋಗ್ಯವಾಗಿದ್ದೇನೆ, ಸಕ್ಕರೆ, ಬಿಪಿ, ಆಗಲಿ ಯಾವುದೇ ಕಾಯಿಲೆ ಇಲ್ಲ, ಬೇರೆ ಅವ್ಯಾಸಗಳು ಇಲ್ಲ, ಮನಸ್ಸಿಗೆ ನೆಮ್ಮದಿ ಸಿಕ್ಕಿದೆ.

ಈ ರಾಮ ಕೋಟಿ ಬರೆಯುವದರಿಂದ ನಾನು ಹೇಳಿದ ಮಾತು ನಡೆಯುತ್ತದೆ ಎನ್ನುತ್ತಾರೆ. ಸರ್ವರಿಗೂ ಒಳ್ಳೆಯದನ್ನು ಮಾಡುವ ಆಸೆ ಇರುವ ಪಾಚಾ ಸಾಭ್ ಬಗ್ಗೆ ಸ್ಥಳೀಯರು ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿ ಶ್ರೀರಾಮನ ಮೇಲಿರುವ ಆಸೆ, ಭಕ್ತಿಯನ್ನ ಪ್ರತಿಯೊಬ್ಬರು ಮೆಚ್ಚುವಂತಂಹದ್ದಾಗಿದೆ. ಈತನ ಸಿದ್ಧಾಂತ, ಕೋಮು ಸೌಹಾರ್ಧತೆ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *