ಬಳ್ಳಾರಿ: ಕಳೆದೊಂದು ವರ್ಷಗಳಿಂದ ಡಿಸಿಎಂ ಕನಸು ಕಂಡಿದ್ದ ಸಚಿವ ಶ್ರೀರಾಮುಲು ಡಿಸಿಎಂ ಕನಸು ಕೊನೆಗೂ ಭಗ್ನವಾಗಿದೆ.
ಈ ಬಾರಿ ಯಾರಿಗೂ ಡಿಸಿಎಂ ಸ್ಥಾನ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಸ್ಥಾನದ ಬಹುದೊಡ್ಡ ಆಕಾಂಕ್ಷಿಯಾಗಿದ್ದ ಸಚಿವ ಶ್ರೀರಾಮುಲು ಅವರಿಗೆ ಭಾರಿ ಹಿನ್ನಡೆಯಾಗಿದೆ. ಇದನ್ನೂ ಓದಿ: ಪ್ರವಾಹ, ಕೋವಿಡ್ ನಿರ್ವಹಣೆಗಾಗಿ ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ
ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ದಿನವೇ ಬಹುತೇಕವಾಗಿ ಮೂರು ಜನರಿಗೆ ಡಿಸಿಎಂ ಸ್ಥಾನ ಸಿಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಅಲ್ಲದೇ ಶ್ರೀರಾಮುಲು ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು, ಸಿಎಂ ಪ್ರಮಾಣ ವಚನ ಸ್ವೀಕರಿಸಿದ ದಿನವೇ ರಾಮುಲು ಅವರು ಡಿಸಿಎಂ ಆಗಿದ್ದಾರೆ ಎಂದು, ಮನೆಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು.
ಆದರೆ ಈಗ ರಾಜ್ಯದಲ್ಲಿ ಯಾರಿಗೂ ಡಿಸಿಎಂ ನೀಡದ ಹಿನ್ನೆಲೆಯಲ್ಲಿ ರಾಮುಲು ಅವರಿಗೆ ಭಾರಿ ನಿರಾಸೆಯಾಗಿದೆ. ವಾಲ್ಮೀಕಿ ಸಮುದಾಯದ ಮುಖಂಡ, 6 ಬಾರಿ ಗೆದ್ದಿರುವ ಆಧಾರದಮೇಲೆ ಡಿಸಿಎಂ ಸಿಗತ್ತದೆ ಎಂದು ನಿರೀಕ್ಷೆ ಇಟ್ಟಿದ್ದ ರಾಮುಲು ಅವರು ಈಗ ಕೇವಲ ಸಚಿವ ಸ್ಥಾನಕ್ಕೆ ಮಾತ್ರ ತೃಪ್ತಿ ಪಡಬೇಕಾಗಿದೆ.