ಶೌಚಕ್ಕೆ ತೆರಳಿದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ

Public TV
2 Min Read

ನವದೆಹಲಿ: ಅಪ್ರಾಪ್ತೆ ಶೌಚಕ್ಕೆ ಹೋದಾಗ ಇಬ್ಬರು ಕಾಮುಕರು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.

ಆಗ್ನೇಯ ದೆಹಲಿಯ ಜೆಜೆ ಕಾಲೋನಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದ್ದು, 13 ವರ್ಷದ ಬಾಲಕಿ ಸಾಮೂಹಿಕ ಶೌಚಾಲಯಕ್ಕೆ ತೆರಳಿದಾಗ ಇಬ್ಬರು ಕಾಮುಕರು ಬಾಲಕಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ ಒಬ್ಬ ಬಾಲಕಿ ಮನೆಯ ನೆರೆಹೊರೆಯವನು ಎನ್ನಲಾಗಿದೆ.

ರಾತ್ರಿ 9ರ ಸಮಾರಿಗೆ ಬಾಲಕಿ ಶೌಚಕ್ಕೆಂದು ಸಾಮೂಹಿಕ ಶೌಚಾಲಯಕ್ಕೆ ಬಂದಿದ್ದಾಳೆ. ಈ ವೇಳೆ ಅದೇ ಪ್ರದೇಶದ ವ್ಯಕ್ತಿ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಾಲಕಿಯನ್ನು ಎಳೆದೊಯ್ದಿದ್ದಾನೆ. ನಂತರ ಸ್ನೇಹಿತನನ್ನು ಕಾವಲಿಗೆ ಇರಿಸಿ ಅತ್ಯಾಚಾರ ಎಸಗಿದ್ದಾನೆ. ಅಪರಾಧ ಎಸಗಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಬಾಲಕಿ ಕಾಣದ್ದನ್ನು ಗಮನಿಸಿದ ಮನೆಯವರು, ಹುಡುಕಲು ಆರಂಭಿಸಿದ್ದಾರೆ. ಆದರೆ ಬಲಕಿ ಸಿಕ್ಕಿಲ್ಲ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಸೆಕ್ಷನ್‍ಗಳಡಿ ಹಾಗೂ ಪೋಕ್ಸೋ ಕಾಯ್ದೆಯಡಿ ಬಾಲಕಿಯ ತಂದೆ ಪ್ರಕರಣ ದಾಖಲಿಸಿದ್ದು, ಈಗಾಗಲೇ ನಾವು ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಆಗ್ನೇಯ ಡಿಸಿಪಿ ಆರ್‍ಪಿ ಮೀನಾ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಬಾಲಕಿಯ ತಂದೆ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಊಟದ ಬಳಿಕ ಬಾಲಕಿ ಮನೆಯಿಂದ ಸುಮಾರು 50-100 ಮೀಟರ್ ದೂರದಲ್ಲಿರುವ ಶೌಚಾಲಯಕ್ಕೆ ತೆರಳಿದ್ದಳು. ನಂತರ ತುಂಬಾ ಸಮಯ ಕಳೆದರೂ ಬಾಲಕಿ ಮರಳಿಲಿಲ್ಲ. 15-20 ನಿಮಿಷಗಳ ಬಳಿಕ ನಾವೇ ಹುಡುಕಲು ಪ್ರಾರಂಭಿಸಿದೆವು. ಕಾಡಿನ ಬಳಿ ಗಾಯಗೊಂಡ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆ ಕುರಿತು ಬಾಲಕಿ ತನ್ನ ತಂದೆಗೆ ವಿವರಿಸಿದ್ದು, ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಾಮಾನ್ಯವಾಗಿ ಯಾವಾಗಲೂ ಅವಳ ತಾಯಿಯೇ ಅವಳನ್ನು ಶೌಚಕ್ಕೆ ಕರೆದೊಯ್ಯುತ್ತಿದ್ದಳು. ಆದರೆ ಹತ್ತಿರವಿದ್ದರಿಂದ ಅಂದು ಒಬ್ಬಳನ್ನೆ ಕಳುಹಿಸಿದೆವು. ಹೊರಗಡೆ ಸುರಕ್ಷಿತವಾಗಿಲ್ಲ ಎಂಬುದನ್ನು ನಾವು ನಿರೀಕ್ಷಿಸಿರಲೇ ಇಲ್ಲ. ಬಾಲಕಿಯ ಹೊಟ್ಟೆ ಭಾಗದಲ್ಲಿ ಕೆಲ ಗಾಯಗಳಾಗಿವೆ. ಪಕ್ಕದ ಮನೆಯವನೇ ಮಾಡಿರುವ ಕುರಿತು ನಮಗೆ ತಿಳಿದಿದೆ ಎಂದು ಬಾಲಕಿಯ ಕುಟುಂಬಸ್ಥರು ವಿವರಿಸಿದ್ದಾರೆ.

ಬಾಲಕಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಅತ್ಯಾಚಾರ ಎಸಗಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಖಚಿತವಾಗಿದೆ. ಕಳೆದ 10 ದಿನಗಳಲ್ಲಿ ಈ ಭಾಗದಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವ 4ನೇ ಪ್ರಕರಣ ಇದಾಗಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *