ಶೈನ್ ಶೆಟ್ಟಿಗೆ ಆಫರ್ ನೀಡಿದ ರಿಷಬ್ ಶೆಟ್ಟಿ

Public TV
2 Min Read

ಬೆಂಗಳೂರು: ಸಿನಿಮಾದಲ್ಲೇ ನಟಿಸಬೇಕು ಎಂದು ನಿರ್ಧರಿಸಿ ಧಾರಾವಾಹಿ ಆಫರ್ ಬಂದರೂ ತಿಸ್ಕರಿಸಿದ್ದ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿಗೆ ಇದೀಗ ಮತ್ತೊಂದು ಅದ್ಭುತ ಅವಕಾಶ ಒಲಿದು ಬಂದಿದೆ. ಈ ಮೂಲಕ ಬಿಗ್ ಬಾಸ್ ಬಳಿಕ ಬಿಗ್ ಬ್ರೇಕ್‍ಗಾಗಿ ಕಾಯುತ್ತಿದ್ದ ಶೈನ್ ಶೆಟ್ಟಿ ಬೆಳ್ಳಿ ಪರದೆ ಮೇಲೆ ಮಿಂಚಲು ಸಿದ್ಧತೆ ನಡೆಸಿದ್ದಾರೆ.

ತನ್ನ ಇಚ್ಛೆಯನ್ನು ಈಡೇರಿಸಿಕೊಳ್ಳಲು ಧಾರಾವಾಹಿಗಳಲ್ಲಿ ನಟಿಸಲು ಸಾಕಷ್ಟು ಆಫರ್‍ಗಳು ಬಂದರೂ ತಿರಸ್ಕರಿಸಿ, ಹೊಟ್ಟೆ ಪಾಡಿಗಾಗಿ ಸ್ಟ್ರೀಟ್ ಫುಡ್ ಕ್ಯಾಂಟೀನ್ ನಡೆಸುತ್ತಿದ್ದ ಶೈನ್ ಶೆಟ್ಟಿಗೆ ಕೊನೆಗೂ ಅವಕಾಶ ಒಲಿದು ಬಂದಿದೆ. ಲಕ್ಷ್ಮಿ ಬಾರಮ್ಮ, ಮೀರಾ ಮಾಧವ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಶೈನ್ ಶೈಟ್ಟಿ ಸಿನಿಮಾಗಳಲ್ಲೇ ನಟಿಸಬೇಕು ಎಂದು ನಿರ್ಧರಿಸಿದ್ದರು. ಇದಕ್ಕಾಗಿ ಯಾವುದೇ ಧಾರಾವಾಹಿಯ ಆಫರ್ ಬಂದರೂ ಒಪ್ಪಿಕೊಂಡಿರಲಿಲ್ಲ. ಆದರೆ ಅದೃಷ್ಟ ಅವರ ಕೈ ಹಿಡಿದಿರಲಿಲ್ಲ. ಹೀಗಾಗಿ ಬಿಗ್ ಬಾಸ್ ಮನೆ ಸೇರಿದ್ದರು.

ಅವರ ನಟನೆಯ ಕರೀಯರ್‍ನಲ್ಲಿ ಬಿಗ್ ಬಾಸ್ ದೊಡ್ಡ ತಿರುವು ತಂದುಕೊಟ್ಟಿದ್ದು, ಇದೀಗ ಹೆಚ್ಚು ಆಫರ್‍ಗಳು ಬರಲು ಆರಂಭಿಸಿವೆ. ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶೈನ್ ಶೆಟ್ಟಿಗೆ ಹಿಟ್ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ ಆಫರ್ ನೀಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹೌದು ರಿಷಬ್ ಶೆಟ್ಟಿಯವರು ರುದ್ರಪ್ರಯಾಗ ಸಿನಿಮಾ ಮಾಡುವುದತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಚಿತ್ರದಲ್ಲಿ ಅನಂತ್ ನಾಗ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದೀಗ ಇನ್ನೊಂದು ಹೊಸ ಸುದ್ದಿ ಹೊರ ಬಿದ್ದಿದ್ದು, ರುದ್ರಪ್ರಯಾಗ ಸಿನಿಮಾದಲ್ಲಿ ಶೈನ್ ಶೆಟ್ಟಿ ಸಹ ನಟಿಸುತ್ತಾರಂತೆ.

ರುದ್ರಪ್ರಯಾಗದಲ್ಲಿ ಶೈನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜಯಣ್ಣ ಫಿಲಂಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ರಿಷಬ್ ಶೆಟ್ಟಿ ನಿರ್ದೇಶನದ ಜೊತೆಗೆ ನಟಯನ್ನೂ ನಿಭಾಯಿಸುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಅನೇಕ ಕಲಾವಿದರನ್ನು ಹುಡುಕಿದ್ದಾರಂತೆ. ಆದರೆ ಯಾರೂ ಸೆಟ್ ಆಗಿಲ್ಲ. ನಂತರ ಇದಕ್ಕೆ ಶೈನ್ ಶೇಟ್ಟಿಯೇ ಸೂಕ್ತ ಎಂದು ಅವರಿಗೆ ಆಫರ್ ನೀಡಿದ್ದಾರಂತೆ.

ಪರಿಸ್ಥಿತಿ ಎಲ್ಲವೂ ಸರಿ ಇದ್ದಿದ್ದರೆ ಚಿತ್ರ ಇಷ್ಟೊತ್ತಿಗೆ ಸೆಟ್ಟೇರಬೇಕಿತ್ತು. ಲಾಕ್‍ಡೌನ್ ಹಿನ್ನೆಲೆ ಇನ್ನೂ ಚಿತ್ರೀಕರಣ ಆರಂಭವಾಗಿಲ್ಲ ಹೀಗಾಗಿ ತಾರಾಗಣದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಚಿತ್ರೀಕರಣ ಆರಂಭವಾದರೆ ಈ ಕುರಿತು ಖಚಿತವಾಗಲಿದೆ. ಚಿತ್ರೀಕರಣದ ಕುರಿತು ಪ್ಲಾನ್ ಮಾಡಿಕೊಂಡಿದ್ದು, ಶೇ.80ರಷ್ಟು ಚಿತ್ರೀಕರಣ ಬೆಳಗಾವಿಯಲ್ಲಿ ನಡೆಯಲಿದೆಯಂತೆ. ಉಳಿದ ಭಾಗವನ್ನು ಉತ್ತರಾಖಂಡ್‍ನ ರುದ್ರಪ್ರಯಾಗದಲ್ಲಿ ನಡೆಸಲು ಉದ್ದೇಶಿಸಲಾಗಿದೆಯಂತೆ.

ರಿಷಬ್ ಶೆಟ್ಟಿಯವರು ರುದ್ರಪ್ರಯಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾಗ ಸಾಕಷ್ಟು ಚರ್ಚೆಯಾಗಿತ್ತು. ಈಗಾಗಲೇ ವಿಶಿಷ್ಟ ಕಥೆಯ ಹಂದರವುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ರಿಷಬ್ ಶೆಟ್ಟಿ, ಈ ಸಿನಿಮಾ ಕಥೆಯ ಮೂಲಕ ಏನು ಹೇಳುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಶೈಟ್ ಶೆಟ್ಟಿ ಚಿತ್ರತಂಡ ಸೇರಿರುವುದು ಅಭಿಮಾನಿಗಳಲ್ಲಿ ಇನ್ನೂ ಸಂತಸ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *