ಶೇ.30ರಷ್ಟು ಸಾಯುವ ಸಾಧ್ಯತೆ ಇದೆ ಎಂದಿದ್ದರು ಡಾಕ್ಟರ್: ಕಣ್ಣೀರಿಟ್ಟ ರಾಣಾ

Public TV
1 Min Read

ಮುಂಬೈ: ರಾಣಾ ದಗ್ಗುಬಾಟಿ ಎಂಬ ಹೆಸರು ಕೇಳಿದ ತಕ್ಷಣ ನೆನಪಾಗೋದು ‘ಬಾಹುಬಲಿ’ ಸಿನಿಮಾ. ಬಲ್ಲಾಳದೇವನಾಗಿ ಮಿಂಚಿದ್ದ ರಾಣಾ ಅವರನ್ನು ಈ ಸಿನಿಮಾ ಒಂದು ಎತ್ತರದ ಸ್ಥಾನಕ್ಕೆ ಕರೆದೊಯ್ತು. ಅಲ್ಲದೆ ಇಡೀ ಭಾರತ ಚಿತ್ರರಂಗವೇ ಹಿಂದಿರುಗಿ ನೋಡುವಂತಾಗಿತ್ತು. ಆದರೆ ಇದೀಗ ರಾಣಾ ಅವರು ತಮ್ಮ ಆರೋಗ್ಯ ನೆನೆದು ಕಣ್ಣೀರು ಹಾಕಿದ್ದಾರೆ.

ಹೌದು. ನಟಿ ಸಮಂತಾ ಅಕ್ಕಿನೇನಿ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಟಾಕ್ ಶೋ ಒಂದರಲ್ಲಿ ರಾಣಾ ಅವರು ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ಅವರು ಕಿಡ್ನಿ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ. ವೇಗವಾಗಿ ಹೋಗುತ್ತಿದ್ದ ನನ್ನ ಜೀವನದಲ್ಲಿ ಒಂದು ದೊಡ್ಡ ಬ್ರೇಕ್ ಬಂತು. ಶೇ.30 ರಷ್ಟು ಸಾಯುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರು ಎಂದು ಭಾವುಕರಾಗಿದ್ದಾರೆ.

ನಿಮಗೆ ಚಿಕ್ಕ ವಯಸ್ಸಿನಿಂದಲೂ ಬಿಪಿ ಇದೆ. ಅಲ್ಲದೆ ಹೃದಯದ ಸುತ್ತ ಸಮಸ್ಯೆಗಳಿವೆ. ಕಿಡ್ನಿ ವೈಫಲ್ಯವಾಗಿದೆ, ಶೇ.70ರಷ್ಟು ನಿಮ್ಮ ದೇಹದಲ್ಲಿ ನ್ಯೂನತೆ ಕಾಡುವ ಸಾಧ್ಯತೆ ಇದೆ. ಅಲ್ಲದೆ ಶೇ.30ರಷ್ಟು ನೀವು ಸಾಯುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿರುವುದಾಗಿ ರಾಣಾ ಕಣ್ಣೀರು ಹಾಕಿದ್ದಾರೆ. ಸದ್ಯ ಶೋದ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ರಾಣಾ ಕಣ್ಣೀರು ಹಾಕುವುದನ್ನು ಕಂಡು ಪ್ರೇಕ್ಷಕರ ಕಣ್ಣಾಲಿಗಳು ಕೂಡ ತುಂಬಿರುವುದನ್ನು ಕಾಣಬಹುದಾಗಿದೆ. ಈ ಸಂಚಿಕೆ ನವೆಂಬರ್ 27ರಂದು ಪ್ರಸಾರ ಆಗಲಿದೆ.

ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ರಾಣಾ ದಗ್ಗುಬಾಟಿ, ಹೈದರಾಬಾದ್ ಮತ್ತು ಮುಂಬೈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಚಿಕಾಗೋಗೆ ತನ್ನ ಕುಟುಂಬಸ್ಥರೊಂದಿಗೆ ತೆರಳಿದ್ದರು. ಕಿಡ್ನಿ ಸಮಸ್ಯೆ ಇರುವ ಕಾರಣ ರಾಣಾಗೆ ಕಿಡ್ನಿ ಕಸಿ ಅಗತ್ಯವಿದ್ದು ಅವರ ತಾಯಿ ಲಕ್ಷ್ಮಿ ಅವರೇ ಮೂತ್ರಪಿಂಡ ದಾನಕ್ಕೆ ಮುಂದಾಗಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಆದರೆ ಇದೀಗ ಸಮಂತಾ ಕಾರ್ಯಕ್ರಮದಲ್ಲಿ ಸ್ವತಃ ರಾಣಾ ಅವರೇ ನೆನಪಿಸಿಕೊಂಡು ಕಣ್ಣೀರು ಹಾಕಿದ್ದು, ಮತ್ತೆ ಸುದ್ದಿ ಮುನ್ನೆಲೆಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *