‘ಶೇಕಿಂಗ್‌ ಡೆಲ್ಲಿ’ ಟಾಸ್ಕ್‌ – ಉಗ್ರನಿಗೆ ಭಟ್ಕಳ ಮೂಲದ ಸಫಿ ಅರ್ಮರ್‌ಜೊತೆ ನಿಕಟ ಸಂಪರ್ಕ

Public TV
1 Min Read

ನವದೆಹಲಿ: ಶುಕ್ರವಾರ ತಡರಾತ್ರಿ ದೆಹಲಿ ಸ್ಪೆಷಲ್ ಸೆಲ್ ಪೊಲೀಸರಿಂದ ಬಂಧನಕ್ಕೆ ಒಳಗಾದ ಐಸಿಸ್ ಉಗ್ರ ಮೊಹಮ್ಮದ್‌ ಮುಸ್ತಾಕೀಮ್‌ ಅಲಿಯಾಸ್‌ ಅಬು ಯೂಸುಫ್‌ ಇಂಡಿಯನ್ ಮುಜಾಹಿದ್ದೀನ್ ಉಗ್ರ ಭಟ್ಕಳ ಮೂಲದ ಸಫಿ ಅರ್ಮರ್ ಜೊತೆ ನಿಕಟ ಸಂಬಂಧ ಹೊಂದಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಕರ್ನಾಟಕದ ಭಟ್ಕಳ ಮೂಲದವನಾಗಿರುವ ಸಫಿ ಅರ್ಮರ್‌ಗೆ ಯೂಸೂಫ್‌-ಆಲ್‌-ಹಿಂದಿ‌ ಹೆಸರಿದ್ದು, ಅಫ್ಘಾನಿಸ್ಥಾನದಲ್ಲಿದ್ದುಕೊಂಡು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನೆರವಿನೊಂದಿಗೆ ಖೊರಾಸಮ್ ಮಾದರಿಯ ಇಸ್ಲಾಮಿಕ್ ಸ್ಟೇಟ್ ನಡೆಸುತ್ತಿದ್ದಾನೆ.

ಭಾರತೀಯ ಗುಪ್ತಚರ ಸಂಸ್ಥೆ ‘ರಾ’ಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿರುವ ಯೂಸುಫ್-ಆ‍ಲ್-ಹಿಂದಿ ಅಫ್ಘಾನಿಸ್ಥಾನದಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಮತ್ತು ಇಸ್ಲಾಮಿಕ್ ಸ್ಟೇಟ್ ಕಲ್ಪನೆಯಲ್ಲಿ ನಂಬಿಕೆ ಇರುವ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸುತ್ತಿದ್ದಾನೆ ಎಂಬ ವಿಚಾರವೂ ಈಗ ಲಭ್ಯವಾಗಿದೆ. ಇದನ್ನೂ ಓದಿ: ನನಗೆ ನಾಲ್ಕು ಮಕ್ಕಳಿದ್ದಾರೆ. ಅವರನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು – ಉಗ್ರನ ಪತ್ನಿ ಪ್ರಶ್ನೆ

ಭಾರತದಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರರನ್ನುಮಟ್ಟ ಹಾಕುತ್ತಿದ್ದಂತೆ ಸಫಿ ಅರ್ಮರ್‌ ಉಗ್ರರನ್ನು ಒಟ್ಟುಗೂಡಿಸುವ ಪ್ರಯತ್ನ ಆರಂಭಿಸಿದ್ದ. ಐಎಸ್‌ಐ ಈತನಿಗೆ ‘ಶೇಕಿಂಗ್‌ ಡೆಲ್ಲಿ’ ಹೆಸರಿನಲ್ಲಿ ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗುವಂತೆ ಸೂಚನೆ ನೀಡಿತ್ತು ಈ ಟಾಸ್ಕ್‌ ಪೂರ್ಣಗೊಳಿಸಲು ಸಫಿ ಅರ್ಮರ್‌ ಉತ್ತರಪ್ರದೇಶದ ಬಲರಾಮ್ ಪುರದ ನಿವಾಸಿಯಾಗಿದ್ದ ಅಬು ಯೂಸುಫ್ ಜೊತೆ ಮಾತುಕತೆ ನಡೆಸಿದ್ದ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

ಯೂಸುಫ್-ಅಲ್-ಹಿಂದಿ ಭಾರತದಲ್ಲಿ ಉಗ್ರ ಚಟುವಟಿಕೆ ಒಲವುಳ್ಳ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಟೆಲಿಗ್ರಾಂ ಮತ್ತು ವಿಚ್ಯಾಟ್ ಗಳನ್ನು ಬಳಕೆ ಮಾಡುತ್ತಿದ್ದಾನೆಂಬ ವಿಚಾರ ತನಿಖೆ ವೇಳೆ ಬಯಲಾಗಿದೆ. ಉಗ್ರ ಅಬು ಯೂಸುಫ್ ಬಳಿಯಿಂದ 15 ಕೆ.ಜಿ.ಗಳಷ್ಟು ಸ್ಪೋಟಕ, ಐಸಿಸ್‌ ಧ್ವಜ ಸೇರಿದಂತೆ 19 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಲ್ಲ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *