ಶೀಘ್ರದಲ್ಲೇ ಪಬ್‍ಜಿ ಭಾರತಕ್ಕೆ ಕಮ್‍ಬ್ಯಾಕ್

Public TV
1 Min Read

ನವದೆಹಲಿ: ಶೀಘ್ರದಲ್ಲಿಯೇ ಪಬ್‍ಜಿ ಮೊಬೈಲ್ ಗೇಮ್ ಭಾರತಕ್ಕೆ ಹೊಸ ಅವತಾರದಲ್ಲಿ ಎಂಟ್ರಿ ನೀಡಲಿದೆ ಎಂದು ಸೌಥ್ ಕೊರಿಯನ್ ಪಬ್‍ಜಿ ಕಾರ್ಪೋರೇಷನ್ ಇಂದು ಘೋಷಣೆ ಮಾಡಿದೆ.

ಕೇವಲ ಭಾರತದ ಮಾರುಕಟ್ಟೆಗಾಗಿ ಪಬ್‍ಜಿ ಗೇಮ್ ಹೊಸ ಸ್ವರೂಪದಲ್ಲಿ ಬರಲಿದೆ ಎಂದು ಕಂಪನಿ ತನ್ನ ಘೋಷಣೆಯಲ್ಲಿ ಹೇಳಿದೆ. ಜೊತೆಗೆ ಇದರಲ್ಲಿ ಚೀನಾದ ಪಾಲುದಾರಿಕೆ ಇರಲ್ಲ ಎಂದು ಸ್ಪಷ್ಟನೆ ನೀಡಿದೆ.

ಪಬ್‍ಜಿ ಕಾರ್ಪೋರೇಷನ್ ನ ಪೇರೆಂಟ್ ಕಂಪನಿ ಕ್ರ್ಯಾಫ್ಟನ್ ಇಂಕ್ ಭಾರತದಲ್ಲಿ 100 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ಸಹ ಘೋಷಿಸಿದೆ. ಕೊರಿಯನ್ ಕಂಪನಿಯೊಂದು ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನ ಹೂಡಿಕೆ ಮಾಡ್ತಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಸೈಬರ್ ಸೆಕ್ಯೂರಿಟಿ ಮತ್ತು ದೇಶದ ಹಿತದ ಹಿನ್ನೆಲೆ ಪಬ್‍ಜಿ ಸೇರಿದಂತೆ ಚೀನಾ ಅ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಕೊರಿಯನ್ ಕಂಪನಿ ಭಾರತಕ್ಕಾಗಿ ಹೊಸ ರೂಪದಲ್ಲಿ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಪಬ್‍ಜಿ ಗೇಮ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ನಿಷೇಧಕ್ಕೊಳಗಾದ ದಿನವೇ ತಾನು ಹಿಂದಿರುಗುವ ಬಗ್ಗೆ ಪಬ್‍ಜಿ ವಿಶ್ವಾಸ ವ್ಯಕ್ತಪಡಿಸಿತ್ತು.

ಭಾರತಕ್ಕೆ ಪಬ್‍ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಹಿಂದಿರುಗಲಿದೆ. ಆದ್ರೆ ಲಾಂಚ್ ಆಗುವ ದಿನವನ್ನ ಕಂಪನಿ ಘೋಷಣೆ ಮಾಡಿಲ್ಲ. ಭಾರತೀಯ ಖಾಸಗಿತನಕ್ಕೆ ಆ್ಯಪ್ ನಿಂದ ಧಕ್ಕೆ ಆಗಲಾರದು ಎಂದು ಪಬ್‍ಜಿ ಸ್ಪಷ್ಟಪಡಿಸಿದೆ.

ವೀಡಿಯೋ ಗೇಮ್ಸ್, ಇ-ಸ್ಪೋರ್ಟ್ಸ್ ಮತ್ತು ಐಟಿ ಇಂಡಸ್ಟ್ರಿಗಳಲ್ಲಿ ಪಬ್‍ಜಿ ಕಾರ್ಪೋರೇಷನ್ ಬಂಡವಾಳ ಹೂಡಿಕೆ ಮಾಡಲಿದೆ. ಭಾರತದ ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಜೊತೆಗೆ ಕಾರ್ಯನಿರ್ವಹಣೆ ಹಿನ್ನೆಲೆ ಸ್ಥಳೀಯ ಮಟ್ಟದಲ್ಲಿ ಪಬ್‍ಜಿ ಕಾರ್ಪೋರೇಷನ್ ಕಚೇರಿ ಸಹ ತೆರೆಯಲಿದೆ.

ವಿಶ್ವದಲ್ಲಿ ಅತಿ ಹೆಚ್ಚು ಡೌನ್‍ಲೋಡ್ ಅಗಿರುವ ಟಾಪ್ 5ರ ಲಿಸ್ಟ್ ನಲ್ಲಿ ಪಬ್‍ಜಿ ಸ್ಥಾನ ಹೊಂದಿದೆ. ಇಡೀ ವಿಶ್ವದಲ್ಲಿ 73 ಕೋಟಿಗೂ ಅಧಿಕ ಜನ ಪಬ್‍ಜಿ ಡೌನ್‍ಲೋಡ್ ಮಾಡಿದ್ದು, ಭಾರತದಲ್ಲಿ 17.5 ಕೋಟಿ ಅಂದ್ರೆ ಶೇ.24ರಷ್ಟು ಬಳಕೆದಾರರನ್ನು ಪಬ್‍ಜಿ ಹೊಂದಿದೆ. ಪಬ್‍ಜಿ ಆಡುವ ಪ್ರತಿ ನಾಲ್ಕು ಜನರಲ್ಲಿ ಓರ್ವ ಭಾರತೀಯನಿರುತ್ತಾನೆ.

Share This Article
Leave a Comment

Leave a Reply

Your email address will not be published. Required fields are marked *