ಶಿಷ್ಯವೇತನಕ್ಕಾಗಿ ಭಿಕ್ಷೆ ಬೇಡಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ

Public TV
2 Min Read

– ಪ್ರತಿಭಟನೆ ವೇಳೆ ಕುಸಿದು ಬಿದ್ದ ವೈದ್ಯ ವಿದ್ಯಾರ್ಥಿನಿ

ದಾವಣಗೆರೆ: ಸರ್ಕಾರಿ ಖೋಟಾದಡಿ ಪ್ರವೇಶ ಪಡೆದಿರುವ ಹೌಸ್ ಸರ್ಜನ್‍ಗಳು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು 16 ತಿಂಗಳ ಶಿಷ್ಯ ವೇತನ ಬಿಡುಗಡೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ನಡೆಸುತ್ತಿರುವ ಪ್ರತಿಭಟನೆ 2 ದಿನ ಪೂರೈಸಿದೆ. ಆದರೆ ಪ್ರತಿಭಟನೆ ಹಿಂಪಡೆಯದಿದರೆ ಲೈಸೆನ್ಸ್ ರದ್ದು ಮಾಡುವುದಾಗಿ ಎಸ್‍ಪಿ, ತಹಶೀಲ್ದಾರ್ ಬೆದರಿಕೆ ಹಾಕಿದ್ದು, ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆ ಬಗೆಹರಿಸುವ ಅಶ್ವಾಸನೆ ನೀಡಿದರು. ಆದರೆ ಇದಕ್ಕೆ ವಿದ್ಯಾರ್ಥಿಗಳು ಒಪ್ಪಿಲ್ಲ. ಬದಲಿಗೆ ಸಾರ್ವಜನಿಕವಾಗಿ ಭಿಕ್ಷೆ ಬೇಡಿ ಶಿಷ್ಯವೇತನಕ್ಕಾಗಿ ಆಗ್ರಹಿಸಿದರು. 16 ತಿಂಗಳಿನಿಂದ 220 ವಿದ್ಯಾರ್ಥಿಗಳಿಗೆ 8 ಕೋಟಿ ರೂ. ಶಿಷ್ಯ ವೇತನ ಬÁಕಿ ಉಳಿಸಿಕೊಂಡಿದೆ. ಶಿಷ್ಯವೇತನ ನೀಡದಿದ್ದರು ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ 16 ತಿಂಗಳ ಶಿಷ್ಯವೇತನ ನೀಡದೆ ಸರ್ಕಾರ ಸತಾಯಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ನಾಗರಾಜು, ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ ತಹಶೀಲ್ಧಾರ್ ಗಿರೀಶ್ ಭೇಟಿ ನೀಡಿದ್ದರು. ವೈದ್ಯಕೀಯ ವಿದ್ಯಾರ್ಥಿಗಳ ಶೀಷ್ಯ ವೇತನ ಪಾವತಿ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ವಿಚಾರ ಕುರಿತಂತೆ ಮ್ಯಾನೇಜ್‍ಮೆಂಟ್‍ನವರು ಹಾಗೂ ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಈ ವೇಳೆ ಲಿಖಿತ ರೂಪದಲ್ಲಿ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟುಹಿಡಿದ ಘಟನೆ ಜರುಗಿತು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತ ವಿದ್ಯಾರ್ಥಿಗಳ ಪರವಾಗಿದೆ. ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ವಿದ್ಯಾರ್ಥಿಗಳು ಕೆಲಸ ಮಾಡಿದ್ದಾರೆ. ಅದಕ್ಕೆ ಧನ್ಯವಾದಗಳನ್ನು ಹೇಳಿದ್ದೇವೆ. ವಿದ್ಯಾರ್ಥಿಗಳ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಗಂಭೀರವಾಗಿ ಪ್ರಯತ್ನ ಮಾಡುತ್ತಿದೆ. ಆದರೆ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಎಲ್ಲಾ ನಿರ್ಧಾರಗಳು ಸರ್ಕಾರದ ಮಟ್ಟದಲ್ಲೇ ತೀರ್ಮಾನವಾಗಬೇಕಿದೆ. ಪ್ರತಿಭಟನೆ ಕೈಬಿಡದಿದ್ದರೆ ಕಾನೂನು ರೀತಿ ಕ್ರಮ ವಹಿಸುವುದು ಅನಿವಾರ್ಯವಾಗುತ್ತದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಹ ವಿದ್ಯಾರ್ಥಿಗಳಿಗೆ ತಿಳಿಹೇಳಿದ್ದಾರೆ. ಪ್ರತಿಭಟನೆ ಮಾಡುವುದು ಸರಿಯಲ್ಲ ಕೂಡಲೇ ಹಿಂಪಡೆಯಿರಿ ಎಂದು ಹೇಳಿದರು.

ಈ ಕುರಿತು ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ವೈದ್ಯ ಶಿಕ್ಷಣ ಸಚಿವ ಸುಧಾಕರ್ ಅವರು, ಖಾಸಗಿ ಕಾಲೇಜುಗಳು ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *