ಶಿಥಿಲಾವಸ್ಥೆಗೆ ತಲುಪಿದ ಕೃಷ್ಣಾ ಸೇತುವೆ- ಹಾಳಾದ ರಸ್ತೆಯಲ್ಲಿ ನಿತ್ಯ ಡೇಂಜರ್ ಪ್ರಯಾಣ

Public TV
2 Min Read

ರಾಯಚೂರು: ಜಿಲ್ಲೆಯಿಂದ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೃಷ್ಣಾ ಬ್ರಿಡ್ಜ್ ಈಗ ಶಿಥಿಲಾವಸ್ಥೆಗೆ ತಲುಪಿದೆ. ಹೈದರಾಬಾದ್‍ಗೆ ಇರುವ ಏಕೈಕ ಮಾರ್ಗ ಸಂಪೂರ್ಣ ಹದಗೆಟ್ಟಿದೆ. ಒಂದೆಡೆ ಸೇತುವೆ ಮೇಲಿನ ರಸ್ತೆ ಹಾಳಾದ್ರೆ ಇನ್ನೊಂದೆಡೆ ಮಹಾ ಪ್ರವಾಹದ ಆತಂಕ ಸೇತುವೆಯ ಗಟ್ಟಿತನಕ್ಕೆ ಸವಾಲು ಎದುರಾಗಿದೆ. ಸದ್ಯ ಪ್ರಯಾಣಿಕರಂತೂ ಭಯದಲ್ಲಿ ಸೇತುವೆ ಮೇಲೆ ಪ್ರಯಾಣಿಸುತ್ತಿದ್ದಾರೆ.

ಜಿಲ್ಲೆಯಿಂದ ಹೈದರಾಬಾದ್, ಮೆಹಬೂಬ್ ನಗರ, ಜಡಚರ್ಲಾ ನಗರಗಳಿಗೆ ರಸ್ತೆ ಸಂಪರ್ಕ ಕೊಂಡಿಯಾಗಿರುವ ರಾಯಚೂರು ತಾಲೂಕಿನ ದೇವಸುಗೂರು ಬಳಿಯ ಕೃಷ್ಣಾ ಸೇತುವೆ ಈಗ ಶಿಥಿಲವಾಸ್ಥೆಗೆ ತಲುಪಿದೆ. ಸೇತುವೆಯ ರಸ್ತೆಯಂತೂ ಆಕ್ಸಿಡೆಂಟ್ ಝೋನ್ ಆಗಿ ಮಾರ್ಪಟ್ಟಿದೆ. ರಸ್ತೆಯಲ್ಲಿ ಎದ್ದಿರುವ ರಾಡ್ ಗಳು ಪ್ರಯಾಣಿಕರಿಗೆ ಜೀವ ಮಾರಕವಾಗಿ ಮಾರ್ಪಟ್ಟಿವೆ. ಎಷ್ಟೋ ವಾಹನಗಳ ಟೈಯರ್‍ಗೆ ರಾಡ್ ಚುಚ್ಚಿ ರಸ್ತೆಯಲ್ಲೇ ನಿಂತು ಪ್ರಯಾಣಿಕರು ಪರದಾಡಿದ್ದಾರೆ.

ಕೇವಲ 20 ಅಡಿ ಅಗಲದ ಸೇತುವೆಯ ಮೇಲೆ ಈಗಲೂ ಭಾರದ ವಾಹನಗಳು ಓಡಾಡುತ್ತಿರುವುದರಿಂದ ಸೇತುವೆ ಮೇಲಿನ ಪ್ರಯಾಣ ತುಂಬಾನೇ ಡೇಂಜರ್ ಆಗಿದೆ. ಸೇತುವೆ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಲಾಗಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ. ಜಿಲ್ಲಾಡಳಿತ ಕನಿಷ್ಠ ರಸ್ತೆ ದುರಸ್ತಿ ಕಡೆಯಾದರೂ ಗಮನಹರಿಸಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.

1943 ರಲ್ಲಿ ನಿರ್ಮಾಣವಾದ ಈ ಸೇತುವೆಗೆ ಈಗ ಬರೋಬ್ಬರಿ 78 ವರ್ಷ. ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಸೇತುವೆಗೆ ಜೋದಿ ಸೇತುವೆ ಅಂತ ಹೆಸರಿಡಲಾಗಿತ್ತು. ಕರ್ನಾಟಕ ಆಂಧ್ರಪ್ರದೇಶದ ವ್ಯವಹಾರಿಕ ಕೊಂಡಿಯಾದ ಈ ಸೇತುವೆ ಈಗಲೂ ವಾಣಿಜ್ಯ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಹೀಗಾಗಿ ಸೇತುವೆ ಮೇಲೆ ಭಾರದ ವಾಹನಗಳೇ ಹೆಚ್ಚು ಓಡಾಡುತ್ತವೆ. ಅಲ್ಲದೆ ಹೈದರಾಬಾದ್‍ಗೆ ತೆರಳಲು ಏಕೈಕ ರಸ್ತೆ ಮಾರ್ಗ ಇದಾಗಿದೆ. ಹೀಗಾಗಿ ಸೇತುವೆಯ ಮೇಲೆ ಹೆಚ್ಚು ವಾಹನ ದಟ್ಟಣೆ ಇರುತ್ತೆ. ಆದ್ರೆ ಈಗ ಸೇತುವೆಯು ಶಿಥಿಲವಾಗುತ್ತಿದೆ, ರಸ್ತೆಯೂ ಹಾಳಾಗಿದೆ. ಇನ್ನೂ ಕೃಷ್ಣಾ ನದಿಯ ಪ್ರವಾಹ ಭೀತಿಯೂ ಇರುವುದರಿಂದ ಪ್ರಯಾಣಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ , ಹದಗೆಟ್ಟ ರಸ್ತೆಯಿಂದಾಗಿ 0.8 ಕಿಮೀ ಉದ್ದದ ಸೇತುವೆಯ ಮೇಲಿನ ಪ್ರಯಾಣ ನಿಜಕ್ಕೂ ನರಕಯಾತನೆ ಮತ್ತು ಅಷ್ಟೇ ಭಯಾನಕವಾಗಿದೆ. ಹಗರಿ- ಜಡಚರ್ಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲಿ ಪರ್ಯಾಯ ಸೇತುವೆ ನಿರ್ಮಾಣದ ಕಾಮಗಾರಿಯಿದ್ದು ಇನ್ನೂ ಪ್ರಕ್ರೀಯ ಆರಂಭದ ಹಂತದಲ್ಲೇ ಇದೆ. ಸುರಕ್ಷಿತ ಪ್ರಯಾಣಕ್ಕೆ ಸಂಬಂಧಪಟ್ಟವರು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಹೊರಬರುತ್ತಿರುವ ಜಲಚರಗಳು
ನಾರಾಯಣಪುರ ಜಲಾಶಯದಿಂದ 2.8 ಲಕ್ಷ ಕ್ಯೂಸೆಕ್ಸ್ ನೀರನ್ನ ಹೊರಬಿಡಲಾಗುತ್ತಿದ್ದು, ಕೃಷ್ಣಾ ನದಿಗೆ ನೀರು ಹೆಚ್ಚಾಗುತ್ತಿದ್ದಂತೆ ಜಲಚರಗಳು ನದಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿವೆ. ಮೊಸಳೆಗಳು ನದಿಪಕ್ಕದ ಗ್ರಾಮಗಳಿಗೆ ನುಗ್ಗುವ ಆತಂಕ ಎದುರಾಗಿದೆ. ರಾಯಚೂರು ತಾಲೂಕಿನ ಶಕ್ತಿನಗರ ಬಳಿ ಕೃಷ್ಣಾ ನದಿಯಲ್ಲಿ ಹೆಚ್ಚಾಗಿ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ. ನದಿ ದಡಕ್ಕೆ ಮೊಸಳೆಗಳು ಬರುತ್ತಿರುವುದರಿಂದ ಜನ ಗಾಬರಿಗೊಂಡಿದ್ದಾರೆ. ಮೊಸಳೆಗಳ ಜೊತೆ ನೀರುನಾಯಿಗಳು ಸಹ ಆಗಾಗ ಕಾಣಿಸಿಕೊಳ್ಳುತ್ತಿವೆ. ನದಿ ಪಾತ್ರದಲ್ಲಿ ಪಂಪ್ ಸೆಟ್ ತೆಗೆದುಕೊಳ್ಳಲು ಸಹ ರೈತರು ಹೆದರುವ ಪರಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹ ಪರಸ್ಥಿತಿ ಎದುರಾದಾಗಲೆಲ್ಲಾ ನದಿ ಪಾತ್ರದ ಗ್ರಾಮಗಳ ಜನರಿಗೆ ಮೊಸಳೆಕಾಟ ಇದ್ದೇ ಇರುತ್ತದೆ. ಅದರಲ್ಲೂ ಕೃಷ್ಣಾ ನದಿಯಲ್ಲಿ ವಿಪರೀತ ಮೊಸಳೆಗಳು ಇರುವುದರಿಂದ ನೀರಿನ ಹರಿವು ಹೆಚ್ಚಾದಾಗಲೆಲ್ಲಾ ಮೊಸಳೆಗಳು ಹೊರಬರುತ್ತವೆ.

Share This Article
Leave a Comment

Leave a Reply

Your email address will not be published. Required fields are marked *