ಶಿಕ್ಷಣದಲ್ಲಿ ಗುಣಾತ್ಮಕ ಸುಧಾರಣೆ – ಉನ್ನತ ಶಿಕ್ಷಣ ಮಂಡಳಿ ಪೆನ್ಸಿಲ್ವೇನಿಯಾ, ಹ್ಯಾರಿಸ್ಬರ್ಗ್ ವಿವಿ ಜೊತೆ ಮಹತ್ವದ ಒಪ್ಪಂದ

Public TV
1 Min Read

ಬೆಂಗಳೂರು: ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಅನುಕೂಲವಾಗುವಂತೆ ರಾಜ್ಯದ ಉನ್ನತ ಶಿಕ್ಷಣ ಮಂಡಳಿ ಹಾಗೂ ಪೆನ್ಸಿಲ್ವೇನಿಯಾ ಗ್ಲೋಬಲ್ ಮತ್ತು ಎಜ್ಯುಕೇಷನ್ ಹಬ್, ಹ್ಯಾರಿಸ್ಬರ್ಗ್ ವಿಶ್ವವಿದ್ಯಾಲಯದ ನಡುವೆ ಬುಧವಾರ ಮಹತ್ವದ ಒಪ್ಪಂದ ಆಯಿತು.

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಸಮಕ್ಷಮದಲ್ಲಿ ನಡೆದ ವರ್ಚುಯಲ್ ಸಭೆಯಲ್ಲಿ ಎರಡೂ ಕಡೆಯ ಉನ್ನತ ಅಧಿಕಾರಿಗಳು ಒಪ್ಪಂದಗಳಿಗೆ ಅಂಕಿತ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಗುಣಮಟ್ಟದ ಬೋಧನೆ ಹಾಗೂ ಸಮಗ್ತ ಶೈಕ್ಷಣಿಕ ಉನ್ನತಿಗೆ ಹೆಚ್ಚು ಒತ್ತು ನೀಡುತ್ತಿದೆ. ಈಗ ಸಹಿ ಹಾಕುತ್ತಿರುವ ಒಪ್ಪಂದಗಳು ಈ ನಿಟ್ಟಿನಲ್ಲಿನ ಸುಧಾರಣೆಗಳಿಗೆ ಪೂರಕವಾಗಿರುತ್ತವೆ ಎಂದರು.

ಈ ವರ್ಷವೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ಇಡೀ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳು ಆಗುತ್ತಿವೆ. ಅದಕ್ಕಾಗಿ ನಮ್ಮ ಸರಕಾರ ಅನೇಕ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ಪೆನ್ಸಿಲ್ವೇನಿಯಾ ಸ್ಟೇಟ್ ಸಿಸ್ಟಂ ಆಫ್ ಹೈಯರ್ ಎಜುಕೇಶನ್ (PASSHE) ಮತ್ತು ಎಮಿರಿಟಸ್‍ನ ಕಾರ್ಯನಿರ್ವಾಹಕ ಉಪ ಕುಲಪತಿ ಡಾ. ಪೀಟರ್ ಗಾಲ್ರ್ಯಾಂಡ್ ಮಾತನಾಡಿ, ಈ ಒಪ್ಪಂದಗಳು ವಿಶ್ವವಿದ್ಯಾಲಯಗಳ ನಡುವಿನ ಶೈಕ್ಷಣಿಕ ಶ್ರೇಷ್ಠತೆಯನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ. ಮುಖ್ಯವಾಗಿ ಕರ್ನಾಟಕ ಮತ್ತು ಪೆನ್ಸಿಲ್ವೇನಿಯಾ ಶೈಕ್ಷಣಿಕವಾಗಿ ಹತ್ತಿರವಾಗುತ್ತಿರುವುದಕ್ಕೆ ಸಂತಸವಾಗಿದೆ ಎಂದರು.

ಸಭೆಯಲ್ಲಿ ಪೆನ್ಸಿಲ್ವೇನಿಯಾದ ಶಿಕ್ಷಣ ವಿಭಾಗದ ಕಾರ್ಯದರ್ಶಿ ನೋ ಒರ್ಟೆಗಾ, ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ಸ್ಕಾಟ್ ಪೆರ್ರಿ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಸೇರಿ ಅನೇಕ ಪ್ರಮುಖರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *