ಶಾಸಕರ ಅಸಮಾಧಾನದಿಂದ ವಿರೋಧ ಪಕ್ಷಗಳು ಲಾಭ ಪಡೆಯುತ್ತವೆ ಎನ್ನುವುದು ಹಾಸ್ಯಾಸ್ಪದ- ಈಶ್ವರಪ್ಪ

Public TV
1 Min Read

ಶಿವಮೊಗ್ಗ: ಕಾಂಗ್ರೆಸ್‍ನಿಂದ ಪಕ್ಷವನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ, ಜೆಡಿಎಸ್ ಮೇಲೆ ಎದ್ದೇಳಲು ಸಾಧ್ಯವಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಆ ಪಕ್ಷಗಳು ಲಾಭ ಪಡೆಯುತ್ತವೆ ಎನ್ನುವುದು ಹಾಸ್ಯಾಸ್ಪದ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ದೊಡ್ಡ ಪಕ್ಷ ಹೀಗಾಗಿ ಅಪೇಕ್ಷಿತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಶನಿವಾರ ಕೋರ್ ಕಮಿಟಿ ಸಭೆ ಆಗಿದೆ. ಅಪೇಕ್ಷಿತರ ಪಟ್ಟಿ ಮಾಡಿ ಕೇಂದ್ರ ಸಮಿತಿಗೆ ಕಳುಹಿಸಿದ್ದೇವೆ. ಕೇಂದ್ರ ಸಮಿತಿ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ಅಸಮಾಧಾನ ಇಲ್ಲ ಎನ್ನುವ ಮಾತನ್ನು ನಾನು ಹೇಳುವುದಿಲ್ಲ. ನಮ್ಮ ಶಾಸಕರಲ್ಲಿ ಸ್ವಲ್ಪ ಅಸಮಾಧಾನ ಇದೆ. ಬಿಜೆಪಿ ಒಂದು ಕುಟುಂಬ ಇದ್ದಂತೆ. ಕುಟುಂಬದಲ್ಲಿ ಇರುವವರು ತಮ್ಮ ಭಾವನೆ ಹೇಳಿಕೊಳ್ಳುತ್ತಾರೆ. ಅದು ಅಸಮಾಧಾನ ಎಂದು ಕೆಲವರು ಹೇಳುತ್ತಾರೆ ಅದನ್ನು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷದ ಸಂಘಟನೆ ಎಷ್ಟರ ಮಟ್ಟಿಗೆ ಇದೆ ಎಂದರೆ ಎಲ್ಲ ಅಸಮಾಧಾನಿತರನ್ನು ಕರೆದು ಕೂರಿಸಿ, ಮಾತುಕತೆ ನಡೆಸಿ ತೃಪ್ತಿಪಡಿಸಿ ಯಶಸ್ವಿ ಕಾಣುತ್ತೇವೆ. ಅಸಮಧಾನಿತರ ಜೊತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಚರ್ಚಿಸಿ ಸರಿಪಡಿಸುತ್ತಾರೆ. ವಿರೋಧ ಪಕ್ಷಗಳು ಶಾಸಕರ ಅಸಮಾಧಾನದ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನೇ ಉಳಿಸಿಕೊಳ್ಳಲು ಆಗದೆ ಸರ್ಕಾರ ಕಳೆದುಕೊಂಡರು. ಇನ್ನು ಜೆಡಿಎಸ್ ಮೇಲೆ ಎದ್ದೇಳುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಆ ಪಕ್ಷಗಳು ಲಾಭ ಪಡೆದುಕೊಳ್ಳುತ್ತವೆ ಎಂದರೆ ಇದು ಹಾಸ್ಯಾಸ್ಪದ. ಯಾವುದೇ ಕಾರಣಕ್ಕೂ ಬಿಜೆಪಿ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಉದ್ಬವವಾಗುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *