ಶಾಲಾ, ಕಾಲೇಜು ಶುಲ್ಕ ಕಡಿತಗೊಳಿಸಿ- ಸಿಎಂ ಬಿಎಸ್‍ವೈಗೆ ನಟ ಕಿರಣ್ ರಾಜ್ ಮನವಿ

Public TV
1 Min Read

ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿ ಇರುವುದರಿಂದ ಶಾಲಾ-ಕಾಲೇಜುಗಳ ಶುಲ್ಕವನ್ನು ಕಡಿಮೆಗೊಳಿಸುವಂತೆ ನಟ ಕಿರಣ್ ರಾಜ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾದಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ಇದೀಗ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಪೋಷಕರು ಜೀವನ ನಡೆಸಲು ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಮಕ್ಕಳ ಶಾಲಾ ಕಾಲೇಜಿನ ಪೂರ್ತಿ ಶುಲ್ಕವನ್ನು ಪಾವತಿಸಲು ಪೋಷಕರು ಕಷ್ಟಪಡುತ್ತಿದ್ದಾರೆ. ಅಲ್ಲದೆ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಂತಹ ಪೋಷಕರ ಬೆಂಬಲಕ್ಕೆ ಇದೀಗ ನಟ ಕಿರಣ್ ರಾಜ್ ನಿಂತಿದ್ದಾರೆ.

ಕಿರುತೆರೆಯ ಕನ್ನಡತಿ ಸಿರಿಯಲ್‍ನಲ್ಲಿ ಮಿಂಚುತ್ತಿರುವ ನಟ ಕಿರಣ್ ರಾಜ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರವೊಂದನ್ನು ಬರೆದಿದ್ದಾರೆ. ‘ಜಗತ್ತಿನೆಲ್ಲೆಡೆ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜನರ ಬದುಕು ಅಲ್ಲೋಲ-ಕಲ್ಲೋಲವಾಗಿದೆ. ಇನ್ನು ಮಕ್ಕಳು ಶಾಲಾ-ಕಾಲೇಜು ಇಲ್ಲದೆ ಆನ್‍ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಲಾ-ಕಾಲೇಜುಗಳ ಶುಲ್ಕವೂ ಸ್ವಲ್ಪವೂ ಕುಗ್ಗಿಲ್ಲ. ದಯವಿಟ್ಟು ಶಾಲಾ-ಕಾಲೇಜುಗಳ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ಈ ಮೂಲಕ ನಿಮ್ಮಲ್ಲಿ, ಎಲ್ಲಾ ಪೋಷಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ನಮ್ಮ ಈ ವಿನಂತಿಯನ್ನು ನೀವು ಪರಿಗಣಿಸಿ, ಪರಿಶೀಲಿಸಿ ಜನರ ಬೆನ್ನೆಲುಬಾಗಿ ನಿಲ್ಲುವೆರೆಂಬ ವಿಶ್ವಾಸವಿದೆ ಎಂದು ಆಶಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದ ಜನರು ಒದ್ದಾಡುತ್ತಿದ್ದು, ಹಲವಾರು ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಈ ಮಧ್ಯೆ ನಟ ಕಿರಣ್ ರಾಜ್ ಕೂಡ ತಮ್ಮ ಫೌಂಡೇಶನ್ ಮೂಲಕ ಅನೇಕ ಮಂದಿಗೆ ಸಹಾಯ ಮಾಡುತ್ತಿದ್ದಾರೆ. ‘ಮಾರ್ಚ್ 22’ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕ ನಟರಾಗಿ ಅಭಿನಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *