ಶಾಪಿಂಗ್ ತಾಣಗಳಲ್ಲಿ ಫ್ಲ್ಯಾಶ್ ಸೇಲ್ ನಿಷೇಧ?

Public TV
2 Min Read

ನವದೆಹಲಿ: ಆನ್‍ಲೈನ್ ಶಾಪಿಂಗ್ ತಾಣಗಳಲ್ಲಿ ನಡೆಯುತ್ತಿರುವ ಕೆಲ ನಿರ್ದಿಷ್ಟ ಫ್ಲ್ಯಾಶ್ ಸೇಲ್ ಗಳನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಫ್ಲ್ಯಾಶ್ ಸೇಲ್ ಹೆಸರಿನಲ್ಲಿ ಗ್ರಾಹಕರಿಗೆ ಮೋಸ, ಅನ್ಯಾಯವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವಾಲಯ ಆನ್‍ಲೈನ್ ಶಾಪಿಂಗ್ ತಾಣಗಳಿಗೆ ಕೆಲ ನಿಯಮಗಳನ್ನು ರೂಪಿಸಿದ್ದು ಕರಡು ಮಾದರಿಯನ್ನು ಬಿಡುಗಡೆ ಮಾಡಿದೆ.

ಫ್ಲಾಶ್ ಸೇಲ್ ಹೆಸರಿನಲ್ಲಿ ನಕಲಿ ಕಂಪನಿಗಳು, ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ.  ಇದನ್ನೂ ಓದಿ: ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

ಹೇಗೆ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ನಿಯಮಗಳನ್ನು ರೂಪಿಸಿತ್ತೋ ಅದೇ ರೀತಿಯಾಗಿ ಆನ್‍ಲೈನ್ ಶಾಪಿಂಗ್ ತಾಣಗಳು ಭಾರತದಲ್ಲಿ ಅನುಸರಣ ಅಧಿಕಾರಿ ಹಾಗೂ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಅಧಿಕಾರಿಗಳನ್ನು ನೇಮಿಸಬೇಕು ಎಂದು ತಿಳಿಸಲಾಗಿದೆ.

ಸಾಂಪ್ರದಾಯಿಕ ಇ-ಕಾಮರ್ಸ್ ಫ್ಲ್ಯಾಷ್ ಮಾರಾಟವನ್ನು ನಿಷೇಧಿಸುವುದಿಲ್ಲ. ಗ್ರಾಹಕರ ಆಯ್ಕೆಯನ್ನು ಮಿತಿಗೊಳಿಸುವ, ಬೆಲೆಗಳನ್ನು ಹೆಚ್ಚಿಸುವ ನಿರ್ದಿಷ್ಟ ಫ್ಲ್ಯಾಶ್ ಮಾರಾಟ ಅಥವಾ ಬ್ಯಾಕ್-ಟು-ಬ್ಯಾಕ್ ಮಾರಾಟವನ್ನು ಮಾತ್ರ ನಿಷೇಧಿಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

2020ರ ಇ-ಕಾಮರ್ಸ್ ಗ್ರಾಹಕರ ಹಕ್ಕುಗಳ ಸಂರಕ್ಷಣಾ ನಿಯಮಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು ಕರಡು ಮಾದರಿಯನ್ನು www.consumeraffairs.nic.in ಪ್ರಕಟಿಸಿದೆ. ಸಾರ್ವಜನಿಕರು ಈ ಕರಡನ್ನು ಓದಿ ಜುಲೈ 6ರ ಒಳಗಡೆ  js-ca@nic.in .nic.in  ಸಲಹೆ ಮತ್ತು ಅಭಿಪ್ರಾಯಗಳನ್ನು ನೀಡಬಬಹುದು ಎಂದು ಸಚಿವಾಲಯ ಕೇಳಿಕೊಂಡಿದೆ.

ಹೊಸ ನಿಯಮಗಳ ಪ್ರಕಾರ ಪ್ರಕಾರ, ಇ-ಕಾಮರ್ಸ್ ಕಂಪನಿಗಳು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ(ಡಿಪಿಐಐಟಿ) ಅಡಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಸರ್ಕಾರಿ ಸಂಸ್ಥೆ, ತನಿಖಾ ಸಂಸ್ಥೆಗಳು ಗುರುತಿನ ಪರಿಶೀಲನೆಗಾಗಿ, ಯಾವುದೇ ಅಪರಾಧಗಳ ಪ್ರಕರಣ ಸಂಬಂಧ ಮಾಹಿತಿಗಳನ್ನು ಕೇಳಿದಾಗ ಕಾನೂನುಬದ್ಧವಾಗಿ ಆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ.

ಏನಿದು ಫ್ಲ್ಯಾಶ್ ಸೇಲ್?
ಕಂಪನಿಯೊಂದು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದ ಬಳಿಕ ಅದನ್ನು ಆನ್‍ಲೈನ್ ಶಾಪಿಂಗ್ ತಾಣಗಳಲ್ಲಿ ಮಾರಾಟ ಮಾಡಲು ಮುಂದಾಗುತ್ತದೆ. ಉತ್ಪನ್ನ ಕಡಿಮೆ ಪ್ರಮಾಣದಲ್ಲಿ ಲಭ್ಯ ಇರುವ ಹಿನ್ನೆಲೆಯಲ್ಲಿ ಗ್ರಾಹಕ ಮೊದಲೇ ಆ ಉತ್ಪನ್ನ ಖರೀದಿಸಲು ಬುಕ್ ಮಾಡಬೇಕಾಗುತ್ತದೆ ಅಥವಾ ಒಂದು ನಿರ್ದಿಷ್ಟ ಸಮಯವನ್ನು ನಿಗದಿ ಮಾಡಲಾಗುತ್ತದೆ. ಆ ನಿರ್ದಿಷ್ಟ ಸಮಯದಲ್ಲಿ ಯಾರಿಗೆ ಅದೃಷ್ಟ ಇರುತ್ತದೋ ಆ ಗ್ರಾಹಕರಿಗೆ ಉತ್ಪನ್ನ ಸಿಗುತ್ತದೆ.

ಈ ರೀತಿಯ ಫ್ಲ್ಯಾಶ್ ಸೇಲ್ ಬಗ್ಗೆ ಹಿಂದಿನಿಂದಲೂ ದೂರುಗಳು ಬರುತ್ತಿದ್ದವು. ಕಂಪನಿಗಳು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಈ ರೀತಿಯ ಫ್ಲ್ಯಾಶ್ ಸೇಲ್ ತಂತ್ರ ಮಾಡುತ್ತಿವೆ. ಕೆಲವು ನಕಲಿ ಕಂಪನಿಗಳು ಉತ್ಪನ್ನ ಮಾರಾಟ ಮಾಡುವ ನೆಪದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ವಸ್ತುಗಳನ್ನು ಮಾರಾಟ ಮಾಡದೇ ಗ್ರಾಹಕರಿಗೆ ಮೋಸ ಮಾಡುತ್ತಿವೆ ಎಂದು ದೂರುಗಳು ದಾಖಲಾಗಿದ್ದವು.

Share This Article
Leave a Comment

Leave a Reply

Your email address will not be published. Required fields are marked *