ಶಹಪುರದಲ್ಲಿ ನಕಲಿ ಕ್ರಿಮಿನಾಶಕ ಮಾರಾಟಕ್ಕೆ ಕೃಷಿ ಅಧಿಕಾರಿಗಳೇ ಶಾಮೀಲು – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು

Public TV
3 Min Read

ಯಾದಗಿರಿ: ಕೊರೊನಾ ಲಾಕ್ ಡೌನ್, ನೆರೆ ಹೊಡೆತಕ್ಕೆ ಸಿಲುಕಿ ಈಗಾಗಲೇ ರೈತರು ನಲುಗಿ ಹೋಗಿದ್ದಾರೆ. ಈ ಮಧ್ಯೆ ರೈತರಿಗೆ ಹಾಡಹಗಲೇ ಮೋಸ ಮಾಡುವ ದಂಧೆ ರಾಜ್ಯದಲ್ಲಿ ಜೋರಾಗಿ ನಡೆಯುತ್ತಿದೆ. ಕರಾಳ ದಂಧೆ ಯಾವ ರೀತಿ ರೈತರಿಗೆ ಪಂಗನಾಮ ಹಾಕುತ್ತೆ ಅನ್ನೋದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ತಾವು ಬೆಳೆದ ಬೆಳೆಗೆ ಯಾವುದೇ ರೋಗ ಬಾರದಿರಲಿ, ಬಿದ್ದಿರುವ ರೋಗ ಹೋಗಲಿ ಅಂತ ರೈತರು ಎಕರೆಗೆ ನೂರಾರು ರೂ. ಖರ್ಚು ಮಾಡಿ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡ್ತಾರೆ. ಆದರೆ ರೈತರು ಯಾವ ರೀತಿಯ ಕ್ರಿಮಿನಾಶಕ ಬಳಸಬೇಕೆಂಬುದನ್ನು ಕೇಂದ್ರ ರೈತರ ಕಲ್ಯಾಣ ಮತ್ತು ಸಹಕಾರ ಇಲಾಖೆ, ರಸಗೊಬ್ಬರ ಮತ್ತು ರಾಸಾಯನಿಕ ಇಲಾಖೆ ಇದರ ಜೊತೆಗೆ ಕೃಷಿ ಇಲಾಖೆ ನಿರ್ಧಾರ ಮಾಡುತ್ತೆ. ಆಮೇಲೆ ಕ್ರಿಮಿನಾಶಕಗಳನ್ನು ಆಗ್ರೋ ಮತ್ತು ಟ್ರೇಡಿಂಗ್ ಅಂಗಡಿಗಳು ಮಾರಾಟ ಮಾಡ್ತಾರೆ. ಆದರೆ ಯಾದಗಿರಿಯಲ್ಲಿ ಮಾತ್ರ ಇಲಾಖೆಯ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಬೆಳೆಗೆ ಯೋಗ್ಯವಲ್ಲದ ರಾಸಾಯನಿಕಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗ್ತಿದೆ. ನಿಮ್ಮ ಪಬ್ಲಿಕ್ ಟಿವಿ ನಡೆಸಿರೋ ರಹಸ್ಯ ಕಾರ್ಯಾಚರಣೆಯಲ್ಲಿ ಆ ಕರಾಳ ದಂಧೆಯ ಬಗ್ಗೆ ನಿಜ ಸ್ವರೂಪ ಬಟಾಬಯಲಾಗಿದೆ.

ರಹಸ್ಯ ಕಾರ್ಯಾಚರಣೆ: 1
ಸ್ಥಳ: ಪಾಟೀಲ್ ಟ್ರೆಡರ್ಸ್, ಶಹಪುರ
ಪ್ರತಿನಿಧಿ: ಹೊಲಕ್ಕೆ ಹೊಡಿಯುವ ಕ್ರಿಮಿನಾಶಕ ಬೇಕಿತ್ತು.
ವ್ಯಾಪಾರಿ 1: ಇದು ತಗೋಳಿ ಚೆನ್ನಾಗಿದೆ.
ಪ್ರತಿನಿಧಿ: ಬಿಲ್ ಬೇಕಿತ್ತು
ವ್ಯಾಪಾರಿ 1: ಬಿಲ್ ಇದಕ್ಕೆ ಬರಲ್ಲ, ಇದು ನಿಮಗೆ ಯಾಕೆ ಬೇಕಿತ್ತು..?
ಪ್ರತಿನಿಧಿ: ಇಲ್ಲ ಬೇಕಿತ್ತು.. ಮತ್ತು ಅದರ ಪಿಸಿ ಅಂದ್ರೆ ಮಾರಾಟದ ಪರ್ಮಿಷನ್ ಚೆಕ್ ಮಾಡಬೇಕು. ಇದಕ್ಕೆ ಮಾತ್ರ ಬರಲ್ವಾ ಇಲ್ಲ.. ಬೇರೆದಕ್ಕೆ ಬರಲ್ವಾ..?
ವ್ಯಾಪಾರಿ 1: ಇಲ್ಲ ಇದಕ್ಕೆ ಬರಲ್ಲಾ..
ವ್ಯಾಪಾರಿ 1: ಇದಕ್ಕೆ ಪಿಸಿ ಕೇಳುತ್ತಿದ್ದಾರೆ


ವ್ಯಾಪಾರಿ 2: ಇದಕ್ಕೆ ಪಿಸಿ ಬರಲ್ಲ..
ಪ್ರತಿನಿಧಿ: ಯಾಕೆ..?
ವ್ಯಾಪಾರಿ02: ಅದಕ್ಕೆ ಪರ್ಮಿಷನ್ ಇಲ್ಲ
ಪ್ರತಿನಿಧಿ: ಮತ್ತೆ ಯಾಕೆ ಮಾರುತ್ತಿದ್ದಿರಿ..?
ವ್ಯಾಪಾರಿ 1: ಮತ್ತೆ ರೈತರು ಕೇಳ್ತಾರೆ
ಪ್ರತಿನಿಧಿ: ಅದರಲ್ಲಿ ಕೆಮಿಕಲ್ ಇರುತ್ತೆ ಅಲ್ವಾ.. ಅದು ರೈತರಿಗೆ ಎಫೆಕ್ಟ್ ಆಗುತ್ತೆ ಅಲ್ವಾ..?
ವ್ಯಾಪಾರಿ 2: ಹೌದು.. ಅದರಲ್ಲಿ ಇರೋದು ಕೆಮಿಕಲ್. ಆದರೆ ಅದು ರೈತರಿಗೆ ಎಫೆಕ್ಟ್ ಆಗಲ್ಲ.
ಪ್ರತಿನಿಧಿ: ಮತ್ತೆ ಯಾಕೆ ಮಾರ್ತೀರಿ..?

ವ್ಯಾಪಾರಿ 2: ಇಲ್ಲ.. ನಾವು ಇದನ್ನ ಅಂಗಡಿಯಲ್ಲಿ ಮಾರಲ್ಲ.. ಹೊರಗಡೆ ಮಾರ್ತೀವಿ
ಪ್ರತಿನಿಧಿ: ಮತ್ತೆ ಹೇಗೆ ಮಾರ್ತೀರಿ..? ಎಲ್ಲಾ ಅಂಗಡಿಯಲ್ಲಿ ಇದೇ ರೀತಿ ಮಾರ್ತಾರಾ..?
ವ್ಯಾಪಾರಿ 2: ಬಿಲ್ ಅಲ್ಲ. ಇದಕ್ಕೆ ಮಾರಾಟ ಮಾಡೋಕೆ ಪರ್ಮಿಷನ್ ಇಲ್ಲ. ಆದ್ರೂ 10 ವರ್ಷದಿಂದ ಮಾರುತ್ತಿದ್ದೇವೆ. ಎಲ್ಲಾ ಅಂಗಡಿಯಲ್ಲೂ ಹೀಗೆ ಮಾಡ್ತಾರೆ. ಬೇಕಿದ್ದರೆ ಇವು ತಗೋಳಿ ಬಿಲ್ ಕೊಡ್ತೀನಿ. ಕಂಪನಿಯವರು ಸಹ ಕೊಡಲ್ಲ. ಅವರಿಗೆ ತಯಾರಿಸಲು ಪರ್ಮಿಷನ್ ಇಲ್ಲ. ಇನ್ನೂ ನಿಮಗೆ ಎಲ್ಲಿಂದ ಬಿಲ್ ಕೊಡ್ತಾರೆ..?
ಪ್ರತಿನಿಧಿ : ಮತ್ತೆ ಕೃಷಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ.. ನಿಮ್ಮ ಅಂಗಡಿ ಮೇಲೆ ದಾಳಿ ಮಾಡಲ್ವಾ..?
ವ್ಯಾಪಾರಿ 2: ಅವರು ಬರ್ತಾರೆ, ಹಿಡೀತಾರೆ.. ದಂಡಹಾಕ್ತಾರೆ. ಸುಮ್ಮನೆ ನೆಪಕ್ಕೆ. ಅವರದ್ದು ನಮ್ಮದು ಹೀಗೆ ನಡೆಯುತ್ತಿರುತ್ತೆ. ಅವರಿಗೆ ಎಲ್ಲಾ ಗೊತ್ತು.. ಸುಮ್ಮನೆ ಚೆಕ್ ಮಾಡೋ ಹಂಗೆ ಮಾಡಿ ಹೋಗ್ತಾರೆ ಅಷ್ಟೇ.. ಇದೆಲ್ಲಾ ಕದ್ದು ಮುಚ್ಚಿ ವ್ಯಾಪಾರ..

ರಹಸ್ಯ ಕಾರ್ಯಾಚರಣೆ: 02
ಸ್ಥಳ: ಸಂಗಮೇಶ್ವರ ಆಗ್ರೋ ಏಜೆನ್ಸಿ, ಹಾಲಭಾವಿ ರೋಡ್ ಶಹಪುರ
ಪ್ರತಿನಿಧಿ: ಹೊಲಕ್ಕೆ ಹಾಕೋಕೆ ಬಯೋ ಕ್ರಿಮಿನಾಶಕ ಕೊಡಿ
ವ್ಯಾಪಾರಿ 1: ತಗೋಳಿ..
ಪ್ರತಿನಿಧಿ: ಬಿಲ್ ಕೊಡಿ
ವ್ಯಾಪಾರಿ 2: ಬಿಲ್ ಬೇಕಾ..
ಪ್ರತಿನಿಧಿ: ಹೌದು ರೀ ಮನೆಯಲ್ಲಿ ಕೇಳ್ತಾರೆ..?
ವ್ಯಾಪಾರಿ 2: ಅದು.. ನಕಲಿ ಬಿಲ್ ಕೊಡು..
ವ್ಯಾಪಾರಿ 1: ಸರಿ..
ಪ್ರತಿನಿಧಿ: ಹೇಗಿದೆ.. ಇದು ಪ್ರೊಡೆಕ್ಟ್
ವ್ಯಾಪಾರಿ 1: ಚೆನ್ನಾಗಿದೆ..

ಈ ಕ್ರಿಮಿನಾಶಕ ಬೆಳೆಗೆ ಬಳಸುತ್ತಿದ್ರಿಂದ ಬೆಳೆ ಸಂಪೂರ್ಣ ವಿಷಕಾರಿ ಜೊತೆಗೆ ಮಣ್ಣು ಫಲವತ್ತತೆ ಕಳೆದುಕೊಂಡು ವಿಷಪೂರಿತವಾಗುತ್ತದೆ. ಬೆಳೆಯ ಮಧ್ಯೆ ನಿತ್ಯ ಜೀವ ನಡೆಸುವ ರೈತರ ಆರೋಗ್ಯದ ಮೇಲೆ ಇದು ಬಹಳಷ್ಟು ಪರಿಣಾಮ ಬಿರುತ್ತದೆ. ರೈತರಿಗೆ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆಗೆ ದಾರಿ, ಚರ್ಮದ ರೋಗಕ್ಕೆ ಕಾರಣವಾಗಿದೆ. ಈ ಕ್ರಿಮಿನಾಶಕಗಳಿಗೆ ಯಾವುದೇ ಬಿಲ್ ಇರುವುದಿಲ್ಲ, ಸರ್ಕಾರದ ಆದಾಯಕ್ಕೂ ಹೊಡೆತ ಬಿಳುತ್ತದೆ ಜಿಎಸ್‍ಟಿ, ಸೇರಿದಂತೆ ಇವುಗಳನ್ನು ಮಾರಾಟ ಮಾಡುವ ಯಾವುದೇ ಲೆಕ್ಕ ಪತ್ರಗಳು ಸಹ ಇರುವುದಿಲ್ಲ.

ಒಟ್ಟಿನಲ್ಲಿ ಮಾನವ ಜೀವನಕ್ಕೆ ಮಾರಕವಾಗಿರೋ ಅದರಲ್ಲೂ ರೈತಾಪಿ ವರ್ಗವನ್ನು ವಿನಾಶ ಮಾಡುವ ಈ ಕೆಮಿಕಲ್ ಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗ್ತಿದೆ. ಕೃಷಿ ಅಧಿಕಾರಿಗಳು ಕ್ರಿಮಿನಾಶಕ ಮಾಲೀಕರಿಂದ ಲಂಚ ಪಡೆದು ತಮಗೂ ರೈತರಿಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರೋದು ವಿಪರ್ಯಾಸ.

Share This Article
Leave a Comment

Leave a Reply

Your email address will not be published. Required fields are marked *