ಶಿವಮೊಗ್ಗ: ಶರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಬಳಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಹೀರೆಕೆರೂರು ಮೂಲದ ರೇಣುಕಮ್ಮ (45) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ರೇಣುಕಮ್ಮ ಸಿಗಂಧೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಬಂದಿದ್ದರು. ದೇವಿಯ ದರ್ಶನ ಮಾಡಿ ಲಾಂಚ್ ನಲ್ಲಿ ಶರಾವತಿ ನದಿ ದಡಕ್ಕೆ ವಾಪಸ್ಸಾಗುತ್ತಿದ್ದರು. ಆದರೆ ಲಾಂಚ್ ನದಿಯ ಮಧ್ಯೆ ಭಾಗಕ್ಕೆ ಬಂದ ವೇಳೆ ರೇಣುಕಮ್ಮ ಲಾಂಚ್ ನಿಂದ ನದಿಗೆ ಧುಮುಕ್ಕಿದ್ದಾರೆ. ತಕ್ಷಣವೇ ಸಮಯ ಪ್ರಜ್ಞೆ ಮೆರೆದ ಲಾಂಚ್ ಸಿಬ್ಬಂದಿ ಪ್ರಕಾಶ್ ನದಿಗೆ ಧುಮುಕಿ ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಿ ದಡಕ್ಕೆ ಕರೆ ತಂದಿದ್ದಾರೆ.
ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸ್ಥಳೀಯರು ಚಿಕಿತ್ಸೆಗಾಗಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೇಲ್ನೊಟಕ್ಕೆ ಕೌಟುಂಬಿಕ ಕಲಹ ಇರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.