ಶತಮಾನದ ಮಹಾ ಸುಳ್ಳುಗಾರನೆಂದು ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ: ಹೆಚ್‍ಡಿಕೆ

Public TV
2 Min Read

– ಸಿದ್ದರಾಮಯ್ಯ ‘ಅಹಿಂದ’ ರಾಮಯ್ಯ ಆಗಿದ್ದು ಏಕೆ?

ಬೆಂಗಳೂರು: ಉಪಚುನಾವಣೆ ಶುರುವಾಗುತ್ತಿದ್ದಂತೆ ಉಭಯ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇಂದು ಮಾಜಿ ಸಿಎಂ ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಸರಣಿ ಟ್ವೀಟ್ ಮಾಡಿ ಕಿಡಿಕಾಡಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಸಂಬಂಧ ಜೆಡಿಎಸ್ ಜೊತೆ ಚರ್ಚೆ ನಡೆಸಿದ್ದೆವು. ಆದರೆ ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರಿಂದ ಬೆಂಬಲ ಸಿಗಲಿಲ್ಲ ಎಂದು ಹಸಿಸುಳ್ಳು ಹೇಳುವ ಮೂಲಕ ಈ ‘ಶತಮಾನದ ಮಹಾ ಸುಳ್ಳುಗಾರ’ ಎಂದು ಸಿದ್ದರಾಮಯ್ಯ ಸ್ವಯಂ ಘೋಷಿಸಿಕೊಂಡಿದ್ದಾರೆ. ಕಳೆದ ಶತಮಾನದಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಒಬ್ಬರಿಗೆ ಅಂಟಿದ್ದ ‘ಮಹಾನ್ ಸುಳ್ಳುಗಾರ’ ಎಂಬ ಕಳಂಕವನ್ನು ತಾನಾಗಿಯೇ ಕಸಿದುಕೊಂಡಿರುವ ಸಿದ್ದರಾಮಯ್ಯ ಈ ಶತಮಾನದ ಮಹಾನ್ ಸುಳ್ಳುಗಾರರಾಗಿ ಹೊರಹೊಮ್ಮಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಂಡ್ಯದ ಮೂಲಕ ಇಂಡಿಯಾ ಹಿಡಿಯುವ ಹಗಲು ಕನಸು ಕಾಣುತ್ತಿರುವ ಕಾಂಗ್ರೆಸಿಗರು ಅನ್ನದಾತನ ಅಸ್ತ್ರ ಬಳಸಿದರೆ ಮಂಡ್ಯದ ಮಣ್ಣಿನ ಮಕ್ಕಳು ತಕ್ಕ ಪಾಠ ಕಲಿಸಲಿದ್ದಾರೆ. ಅನ್ನದಾತರ ಬಗೆಗಿನ ಬದ್ಧತೆ ಬಗ್ಗೆ ನಿಮ್ಮೆಲ್ಲರಿಗಿಂತ ಹೆಚ್ಚಿನ ಕರುಳಬಳ್ಳಿಯ ಸಂಬಂಧ ಜೆಡಿಎಸ್ ಗಿದೆ. ಜೆಡಿಎಸ್ ನೊಂದಿಗೆ ಯಾವುದೇ ಮಾತುಕತೆ ನಡೆಸದೆ ಸಿದ್ದರಾಮಯ್ಯ ಹಸಿ ಸುಳ್ಳು ಹೇಳುವ ಮೂಲಕ ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಎಲುಬಿಲ್ಲದ ನಾಲಿಗೆಯನ್ನು ಹರಿಯಬಿಟ್ಟು ನಗೆಪಾಟಲಿಗೆ ಈಡಾಗಿದ್ದಾರೆ. ಬಾಯಿ ಚಪಲಕ್ಕೆ ಸುಳ್ಳುಗಳನ್ನು ಹೇಳುವ ಚಾಳಿಯನ್ನು ಸಿದ್ದರಾಮಯ್ಯ ಇನ್ನಾದರೂ ಬಿಡಬೇಕು ಎಂದು ಗುಡುಗಿದ್ದಾರೆ.

ರೈತರ ಪರ ಕಾಳಜಿ, ಬದ್ಧತೆಯನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ಕಲಿಯಬೇಕಾದದ್ದು ಏನೂ ಇಲ್ಲ. ಸಂತೆ ಭಾಷಣ ಮಾಡುವ ಸಿದ್ದರಾಮಯ್ಯ ವಿದೂಷಕನಂತೆ ಜೆಡಿಎಸ್ ವಿರುದ್ಧ ಹರಿಹಾಯುತ್ತಿರುವುದು ಪ್ರತಿ ಪಕ್ಷದ ನಾಯಕನಿಗೆ ಭೂಷಣವಲ್ಲ. ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾಡಿದ ಸಾಲ ಮನ್ನಾದಲ್ಲಿ ಲೋಪದೋಷಗಳು ಇದ್ದವು. ಪತ್ರಕರ್ತರ ಪ್ರಶ್ನೆಗೆ ನಾನು ಪ್ರತಿಕ್ರಿಯಿಸಿದ್ದೆ. ನಾನು ಮಾಡಿದ 25 ಸಾವಿರ ಕೋಟಿ ರೂಪಾಯಿಗಳ ಸಾಲಮನ್ನಾದಲ್ಲಿ ಇಂತಹ ಅನ್ಯಾಯಗಳನ್ನು ಸರಿಪಡಿಸಿದ್ದೆ. ಇದರಲ್ಲಿ ಹುಳುಕು ಹುಡುಕುವ ಕಾಂಗ್ರೆಸ್ ನಾಯಕರು ಅನ್ನದಾತನಿಗೆ ಮಂಕು ಬೂದಿ ಎರಚಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ನಾನು ಚುನಾವಣೆ ಬಂದಾಗ ಜಾತಿ ಕಾರ್ಡ್ ಪ್ಲೇ ಮಾಡುತ್ತೇನೆ ಎಂದು ಮೂದಲಿಸುವ ಸಿದ್ದರಾಮಯ್ಯ ‘ಅಹಿಂದ’ ರಾಮಯ್ಯ ಆಗಿದ್ದು ಏಕೆ? ನಕಲಿ ಸಮಾಜವಾದಿಯ ‘ಅಹಿಂದ ‘ಮುಖವಾಡ ಇಡೀ ನಾಡಿಗೆ ಗೊತ್ತಿದೆ. ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತು. ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆವುತ್ತಲದೆ. ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು. ಕೊಂದವರುಳಿವರೆ ಕೂಡಲಸಂಗಮದೇವಾ ಎಂದು ಕೊನೆಯ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *