ಶಂಕರ್ ನಾಗ್ ಸಾವು ನಂಬೋದಕ್ಕೆ ಆಗಲಿಲ್ಲ: ಬಾಲಿವುಡ್ ನಟಿ

Public TV
3 Min Read

ನವದೆಹಲಿ: ಸ್ಯಾಂಡಲ್‍ವುಡ್ ಸಿನಿ ರಂಗಕ್ಕೆ ಅದೊಂದು ಕರಾಳ ದಿನ. 1990ರ ಸೆಪ್ಟೆಂಬರ್ 30 ಆಟೋ ರಾಜಾ ಶಂಕರ್ ನಾಗ್ ವಿಧಿವಶರಾದ ದಿನ. ಇದು ಸ್ಯಾಂಡಲ್‍ವುಡ್‍ಗೆ ಕರಾಳ ದಿನ ಎಂದರೆ ತಪ್ಪಾಗಲಿಕ್ಕಿಲ್ಲ. ಆ ಮಟ್ಟಕ್ಕೆ ಚಿತ್ರರಂಗದಲ್ಲಿ ಪರಿಣಾಮ ಬೀರಿದೆ. ಇದೀಗ ಶಂಕರ್ ನಾಗ್ ಅವರನ್ನು ಬಾಲಿವುಡ್ ನಟಿ ದೀಪಿಕಾ ಚಿಕ್ಲಿಯಾ ನೆನೆದಿದ್ದಾರೆ.

1990ರಲ್ಲಿ ಕಾರು ಅಪಘಾತದಲ್ಲಿ ಶಂಕರ್ ನಾಗ್ ಸಾವನ್ನಪ್ಪುತ್ತಾರೆ. ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿ, ತಮ್ಮ ಹೊಸ ಐಡಿಯಾ, ಸಿನಿಮಾ ತಂತ್ರಜ್ಞಾನದ ಮೂಲಕ ಸ್ಯಾಂಡಲ್‍ವುಡ್ ಸಿನಿ ಜಗತ್ತನ್ನು ಶ್ರೀಮಂತಗೊಳಿಸುವತ್ತ ಹೆಜ್ಜೆ ಇಟ್ಟಿದ್ದ  ಅವರು, ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಆ ರೀತಿ ಪ್ರಭಾವ ಬೀರಿದ ಅತ್ಯದ್ಭುತ ನಟ ಶಂಕರ್ ನಾಗ್. ಇದೀಗ ಶಂಕರ್ ನಾಗ್ ಕುರಿತು ಬಾಲಿವುಡ್ ನಟಿ ದೀಪಿಕಾ ಚಿಕ್ಲಿಯಾ ನೆನೆದಿದ್ದಾರೆ.

ಹೌದು ಶಂಕರ್ ನಾಗ್ ಅಪಾಘಾತದ ಸಂದರ್ಭವನ್ನು ನೆನೆದು ಅವರೊಟ್ಟಿಗೆ ಅಭಿನಯಿಸಿದ ‘ಹೊಸ ಜೀವನ’ ಸಿನಿಮಾದ ಹಾಡನ್ನು ಹಂಚಿಕೊಂಡಿದ್ದಾರೆ. ಲಾಲಿ ಲಾಲಿ ಲಾಲಿ ಜೋ…ನನ್ನ ಬಾಳಿನ ಬಂಗಾರ ಜೋ… ಎಂಬ ಎವರ್ ಗ್ರೀನ್ ಹಾಡನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ಸಾಲುಗಳನ್ನು ಬರೆದಿರುವ ಅವರು, ಈ ಹಾಡು ‘ಹೊಸ ಜೀವನ’ ಚಿತ್ರದ್ದು. ಸಿನಿಮಾದ ಲಾಸ್ಟ್ ಶೆಡ್ಯೂಲ್ ಮುಗಿಸಿದ ನಂತರ ನಟ ಶಂಕರ್ ನಾಗ್ ಅವರ ಕಾರು ಅಪಘಾತವಾಗಿ, ಅವರು ಮೃತರಾದರು. ಆ ಸುದ್ದಿ ಕೇಳಿದ ನನಗೆ ತುಂಬಾ ಶಾಕ್ ಆಗಿತ್ತು, ಅದರಿಂದ ಹೊರಬರಲು ತುಂಬಾ ಸಮಯ ಬೇಕಾಯಿತು. ಈ ಚಿತ್ರ ಸಹ ಇತಿಹಾಸದಲ್ಲೇ ದೊಡ್ಡ ಯಶಸ್ಸು ಕಂಡಿತು. ಆದರೆ ನಾವು ಎಂತಹ ದೊಡ್ಡ ನಷ್ಟ ಅನುಭವಿಸಿದೆವು. ನನ್ನ ಸಹ ನಟ ಶಂಕರ್ ನಾಗ್ ಅವರನ್ನೇ ಕಳೆದುಕೊಂಡೆವು ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ಬಾಲಿವುಡ್ ನಟಿ ದೀಪಿಕಾ ಚಿಕ್ಲಿಯಾ 1983ರಲ್ಲಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಅವರು ಜನಪ್ರಿಯರಾಗಿದ್ದು 1987-88ರ ಅವಧಿಯಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿ ಮೂಲಕ. ಈ ಧಾರಾವಾಹಿಯಲ್ಲಿ ಅವರು ಸೀತೆಯಾಗಿ ಅಭಿನಯಿಸಿದ್ದಾರೆ. ನಂತರ ಅವರಿಗೆ ಕನ್ನಡದಲ್ಲೂ ಅವಕಾಶ ಸಿಗಲು ಆರಂಭಿಸಿತು. ಮಂಡ್ಯದ ಗಂಡು ಅಂಬರೀಷ್ ಜೊತೆ ‘ಇಂದ್ರಜಿತ್’ ಸಿನಿಮಾದಲ್ಲಿ ನಟಿಸಿದ್ದರು. ಆನಂತರ ಶಂಕರ್ ನಾಗ್ ಜೊತೆ ‘ಹೊಸ ಜೀವನ’ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದರು. ಎಚ್.ಆರ್.ಭಾರ್ಗವ ಅವರ ನಿರ್ದೇಶನದಲ್ಲಿ ಶಂಕರ್ ನಾಗ್ ಮತ್ತು ದೀಪಿಕಾ ನಟಿಸಿದ್ದ ‘ಹೊಸ ಜೀವನ’ ಚಿತ್ರ ತಮಿಳಿನ ‘ಪಧಿಯಾ ಪಾಧೈ’ನ ರಿಮೇಕ್ ಆಗಿತ್ತು. ಅಲ್ಲದೆ ಹೊಸ ಜೀವನ ಚಿತ್ರಕ್ಕೆ ಹಂಸಲೇಖ ಅವರು ಸಂಗೀತ ಸಂಯೋಜಿಸಿದ್ದರು. ಈ ಚಿತ್ರದ ಹಾಡುಗಳು ದೊಡ್ಡ ಹಿಟ್ ಆಗಿದ್ದವು. ಈಗಲೂ ಸಹ ಎವರ್ ಗ್ರೀನ್ ಹಾಡುಗಳಾಗಿವೆ.

ಕೇವಲ 12 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದ ಶಂಕರ್ ನಾಗ್ ಸುಮಾರು 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಸಿನಿಮಾ ಮಾತ್ರವಲ್ಲದೆ, ರಂಗಭೂಮಿ, ಧಾರಾವಾಹಿ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದರು. 1990ರ ಸೆ.30ರಂದು ಸಿನಿಮಾ ಮುಹೂರ್ತಕ್ಕಾಗಿ ಉತ್ತರ ಕರ್ನಾಟಕದ ಕಡೆಗೆ ಹೊರಟಿದ್ದ ಶಂಕರ್ ನಾಗ್, ದಾವಣಗೆರೆ ಬಳಿಯ ಆನಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *