ವ್ಯಾಲೆಂಟೈನ್ಸ್ ಡೇ ಹುಡಗಿಯರ ಕಾಟ, 5 ದಿನ ರಜೆ ಕೊಡಿ- ಪ್ರಿನ್ಸಿಪಾಲ್‍ಗೆ ವಿದ್ಯಾರ್ಥಿ ಪತ್ರ

Public TV
2 Min Read

ಚಾಮರಾಜನಗರ: ಯುವಕನಿಗೆ ವ್ಯಾಲೆಂಟೈನ್ಸ್ ಡೇ ದಿನ ಹುಡುಗಿಯರ ಕಾಟವಂತೆ. ಅವರ ಕಾಟ ತಪ್ಪಿಸಿಕೊಳ್ಳಲು ಐದು ದಿನ ರಜೆ ಕೊಡಿ ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಬರೆದ ರಜೆ ಅರ್ಜಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ದ್ವಿತೀಯ ಬಿ.ಕಾಂ. ಯುವಕ ಪತ್ರ ಬರೆದಿದ್ದಾನೆ. ಹುಡುಗಿಯರ ಕಾಟ ತಾಳಲಾರದೆ ಫೆಬ್ರುವರಿ 14 ರವರೆಗೆ ಐದು ದಿನಗಳ ಕಾಲ ರಜೆ ಬೇಕೆಂದು ಈ ವಿದ್ಯಾರ್ಥಿ ಕೇಳಿರುವ ರಜಾ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನೊಂದು ವಿಶೇಷ ಎಂದರೆ ಈ ರಜಾ ಅರ್ಜಿ ಮೇಲೆ ಪ್ರಾಂಶುಪಾಲರ ಸೀಲ್ ಹಾಗೂ ಸಹಿಯೂ ಇದ್ದು, ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

ಪತ್ರದಲ್ಲಿ ಏನಿದೆ?
ವ್ಯಾಲೆಂಟೈನ್ ಡೇ ಪ್ರಯುಕ್ತ 5 ದಿನಗಳ ಕಾಲ ರಜೆಯನ್ನು ಕೋರಿ ಎಂದು ವಿಷಯ ನಮೂದಿಸಲಾಗಿದ್ದು, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಆಚರಿಸುತ್ತಿರುವ ವ್ಯಾಲೆಂಟೈನ್ ಡೇ ಸಂದರ್ಭದಲ್ಲಿ ಹುಡುಗಿಯರ ಕಾಟವನ್ನು ತಡೆಯಲಾರೆ. 5 ದಿನಗಳ ವರೆಗೆ ರಜೆ ಕೊಡಬೇಕೆಂದು ಪ್ರಾಂಶುಪಾಲರಲ್ಲಿ ಕೇಳುತ್ತಿದ್ದೇನೆ ಎಂದು ಬರೆಯಲಾಗಿದೆ.

ಈ ರಜಾ ಅರ್ಜಿಯನ್ನು ಫೆಬ್ರುವರಿ 9 ರಂದು ಬರೆಯಲಾಗಿದೆ. ಅರ್ಜಿಯ ಕೆಳಗಡೆ ಇನ್ಸಿಟ್ಯೂಟ್ ಹೆಡ್ ಸಹಿ ಎಂಬಲ್ಲಿ ಪ್ರಾಂಶುಪಾಲರ ಸೀಲ್ ಹಾಕಿ ಹಸಿರು ಶಾಯಿಯಲ್ಲಿ ಸಹಿ ಮಾಡಲಾಗಿದೆ. ಆದರೆ ಈ ಪತ್ರಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ವಿದ್ಯಾರ್ಥಿ ಸ್ಪಷ್ಟಪಡಿಸಿದ್ದಾನೆ. ಯಾರೋ ನನ್ನನ್ನ ಹೀಯಾಳಿಸಲು, ಹಾಸ್ಯ ಮಾಡಲು ಈ ರೀತಿ ಪತ್ರ ಸೃಷ್ಟಿ ಮಾಡಿದ್ದಾರೆ. ಈ ಪತ್ರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ನನಗೆ ಮಾನಸಿಕವಾಗಿ ನೋವಾಗಿದೆ. ನಮ್ಮ ಕಾಲೇಜಿನ ಪ್ರಾಂಶುಪಾಲರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಈ ವಿದ್ಯಾರ್ಥಿ ಆಗ್ರಹಿಸಿದ್ದಾನೆ.

ರಜೆ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಸೀಗನಾಯಕ, ವಿದ್ಯಾರ್ಥಿ ಈ ರೀತಿ ಪತ್ರ ಬರೆದಿಲ್ಲ ಎನ್ನುತ್ತಿದ್ದಾನೆ. ಇಂದೇ ಸಭೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಧ್ಯಾಪಕರ ಜೊತೆ ಚರ್ಚೆ ನಡೆಸಿ ಕಾಲೇಜು ಶಿಸ್ತು ಸಮಿತಿ ಮುಂದಿಡುತ್ತೇವೆ. ವಿದ್ಯಾರ್ಥಿಯ ಹಿತ ದೃಷ್ಟಿಯಿಂದ ಸತ್ಯಾಂಶ ತಿಳಿದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *