ವ್ಯಾಕ್ಸಿನ್ ಪೂರೈಕೆಯಲ್ಲಿ ಎರಡ್ಮೂರು ದಿನ ವ್ಯತ್ಯಯ: ಕೊಡಗು ಡಿಸಿ

Public TV
2 Min Read

– ಕೊರೊನಾ ಅಬ್ಬರದ ನಡುವೆ ಖಾಲಿಯಾಗುತ್ತಿದೆ ಲಸಿಕೆ

ಮಡಿಕೇರಿ: ಒಂದೆಡೆ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ರಾಜ್ಯದ ವಿವಿಧೆಡೆ ಲಸಿಕಾ ಕೇಂದ್ರದ ಬಳಿ ನೋ ಸ್ಟಾಕ್(ಲಸಿಕೆ ಖಾಲಿಯಾಗಿದೆ) ನಾಳೆ ಬನ್ನಿ ಎಂಬ ಸಿದ್ಧ ಉತ್ತರ ಎದುರಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಲು ಮೊದಲು ಹಿಂಜರಿದ ಜನ, ಈಗ ಕೊರೊನಾ ಲಸಿಕೆ ಪಡೆಯಲು ಮುಗಿಬೀಳುತ್ತಿದ್ದಾರೆ. ಆದರೆ ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೊರತೆ ಎದುರಾಗುತ್ತಿದ್ದು, ಸ್ಟಾಕ್ ಇಲ್ಲ ಎಂಬ ಉತ್ತರ ಸಿಗುತ್ತಿದೆ.

ಕೊಡಗಿನಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ. ಆದರೆ ಇಂದು ಹೇಗೋ ಎಲ್ಲ ಸೆಂಟರ್ ನಲ್ಲೂ ವ್ಯಾಕ್ಸಿನ್ ನೀಡಲಾಗಿದೆ. ಆದರೆ ನಾಳೆಯಿಂದ ಕೊಡಗಿನಲ್ಲಿ ವ್ಯಾಕ್ಸಿನ್ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಕ್ಸಿನ್ ಗಾಗಿ ಸಾರ್ವಜನಿಕರು ಎರಡ್ಮೂರು ದಿನ ಕಾಯಲೇ ಬೇಕು, ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಯ ಲಸಿಕೆ ಕೊರತೆಯನ್ನು ಒಪ್ಪಿಕೊಂಡ ಸಚಿವ ಸುಧಾಕರ್

 

ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡಬೇಕೆಂದು ಸರ್ಕಾರ ಸೂಚಿಸಿರುವುದರಿಂದ 800 ಡೋಸ್ ಮಾತ್ರ ಕೊಡಗು ಜಿಲ್ಲೆಗೆ ಸಿಕ್ಕಿದೆ. ಹೀಗಾಗಿ ಸಾರ್ವಜನಿಕರಿಗೆ ವ್ಯಾಕ್ಸಿನ್ ನಲ್ಲಿ ವ್ಯತ್ಯಯ ಅಗುತ್ತದೆ. ಸಾರ್ವಜನಿಕರು ವ್ಯಾಕ್ಸಿನ್ ಬರುವವರೆಗೂ ಎರಡ್ಮೂರು ದಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಅರೋಗ್ಯ ಅಧಿಕಾರಿ ಮೋಹನ್, ಜಿಲ್ಲೆಗೆ 2,900 ಡೋಸ್ ಲಸಿಕೆ ಬಂದಿತ್ತು. ಕೊಡಗಿನಲ್ಲಿರುವ ಎಲ್ಲ ಲಸಿಕೆ ಕೇಂದ್ರಗಳಿಗೆ ಕಳುಹಿಸಲಾಗಿದೆ. ಎಲ್ಲ ಕಡೆಗಳಲ್ಲಿ ಜನರು ಬೆಳಿಗ್ಗೆಯೇ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ. ಕೆಲವು ಕಡೆ ಮಧ್ಯಾಹ್ನದ ವೇಳೆಗೆ ವ್ಯಾಕ್ಸಿನ್ ಖಾಲಿಯಾಗಿದೆ. 2 ದಿನಗಳ ಕಾಲ ಲಸಿಕೆ ಇರುವುದಿಲ್ಲ. ಸರ್ಕಾರ ಎರಡು ದಿನಗಳಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದೆ. ಆದರೆ ಬಂದ ಬಳಿಕವಷ್ಟೇ ಖಚಿತವಾಗಲಿದೆ ಎಂದು ತಿಳಿಸಿದ್ದಾರೆ.

ಲಸಿಕೆ ಕೊರತೆ ಒಪ್ಪಿಕೊಂಡ ಸುಧಾಕರ್
ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ನೀಗಿಸಲು ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನ ಭೇಟಿ ಮಾಡುತ್ತೇನೆ. ಲಸಿಕೆ ಹೆಚ್ಚಾಗಿ ನೀಡಲು ಮನವಿ ಮಾಡುತ್ತೇನೆ ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಲಸಿಕೆ ಕೊರತೆಯನ್ನು ಒಪ್ಪಿಕೊಂಡಿದ್ದಾರೆ.

ರಾಜ್ಯದಲ್ಲಿ ಲಸಿಕೆ ಕೊರತೆ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಲಸಿಕೆ ಬರುತ್ತಿದೆ, ಈ ತಿಂಗಳು ಹೆಚ್ಚಾಗಿ ಲಸಿಕೆ ಬರಬೇಕಿತ್ತು ಆದರೆ ತಡವಾಗಿದೆ. ಲಸಿಕೆ ಪೂರೈಕೆ ಹೆಚ್ಚಿಸುವಂತೆ ಮನವಿ ಮಾಡಲು ಸೋಮವಾರ ಅಥವಾ ಮಂಗಳವಾರ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *