ವ್ಯಾಕ್ಸಿನ್ ನೀಡಿದ ಬಳಿಕ ಶಾಲಾ-ಕಾಲೇಜು ಆರಂಭಕ್ಕೆ ತಾಂತ್ರಿಕ ಸಮಿತಿ ಸಲಹೆ: ಸುಧಾಕರ್

Public TV
2 Min Read

ಚಿಕ್ಕಬಳ್ಳಾಪುರ: ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮೇಲೆ ಕೋವಿಡ್ ಲಸಿಕೆ ನೀಡಿ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುವುದು. ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಜನರಲ್ಲಿ ಯಾವುದೇ ಗೊಂದಲ ಬೇಡ. ಲಸಿಕೆ ನೀಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತ ಟ್ಯಾಬ್ ಗಳನ್ನು ವಿತರಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳ ಆರಂಭಕ್ಕೂ ಮುನ್ನವೇ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಿದ್ದು, ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಲಸಿಕ ಪಡೆದು ಕೋವಿಡ್ ವೈರಾಣು ವಿರುದ್ಧ ಸರ್ಕಾರ ಮಾಡುತ್ತಿರುವ ಹೋರಾಟದಲ್ಲಿ ಕೈ ಜೋಡಿಸಬೇಕು. ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಕಾಲೇಜುಗಳ ಆರಂಭಕ್ಕೂ ಮೊದಲೇ 18 ವರ್ಷ ತುಂಬಿದ ಎಲ್ಲರಿಗೂ ಲಸಿಕೆ ನೀಡಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು. ಇದನ್ನೂ ಓದಿ: 1.55 ಲಕ್ಷ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ವಿತರಣೆಗೆ ಚಾಲನೆ

ನಿನ್ನೆಯವರೆಗೆ ರಾಜ್ಯದಲ್ಲಿ 2 ಕೋಟಿ ಲಸಿಕೆ ನೀಡಲಾಗಿದ್ದು, ಜೂನ್ 21ರಂದು ಹಮ್ಮಿಕೊಂಡಿದ್ದ ಒಂದು ದಿನದ ಲಸಿಕಾ ಮೇಳದಲ್ಲಿ 11 ಲಕ್ಷಕ್ಕೂ ಹೆಚ್ವು ಜನರಿಗೆ ಲಸಿಕೆ ನೀಡಿ ದಾಖಲೆ ಬರೆಯಲಾಗಿದೆ. ಈ ಪೈಕಿ 40ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರೆಯಲಿದ್ದು ಇಡೀ ರಾಜ್ಯವನ್ನು ಕೋವಿಡ್ ಮುಕ್ತ ಮಾಡಲು ಸರ್ಕಾರ ಪಣ ತೊಟ್ಟಿದೆ ಎಂದರು.

ಮೂರನೇ ಅಲೆ ಬರುವ ಸಾಧ್ಯತೆಗಳ ಬಗ್ಗೆ ತಜ್ಞರು ಸಲಹೆ ನೀಡಿರುವ ಕಾರಣ ಎಲ್ಲರೂ ಎರಡೂ ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಮಾಸ್ಕ್ ಧರಿಸುವುದನ್ನು ಮತ್ತು ವ್ಯಕ್ತಿಗತ ಅಂತರ ಕಾಪಾಡುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೆ ಪೂರಕವಾಗಿ ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೂ ಆನ್‍ಲೈನ್ ಶಿಕ್ಷಣ ದೊರೆಯುವಂತೆ ಉಚಿತ ಟ್ಯಾಬ್ ಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಸರ್ಕಾರದ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *