ವ್ಯಾಕ್ಸಿನ್ ಕೇಳಿದ್ದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಕಿರುಕುಳ ನೀಡ್ತಿದ್ದಾರೆ: ವೆಂಕಟೇಶ್

Public TV
3 Min Read

ಬೆಂಗಳೂರು: ವ್ಯಾಕ್ಸಿನ್ ಕೇಳುವುದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೆಚ್.ಎಮ್ ವೆಂಕಟೇಶ್ ಕಿಡಿಕಾರಿದ್ದಾರೆ.

ಮೇ ತಿಂಗಳಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯಾಕ್ಸಿನ್ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಬಗ್ಗೆ ಹಾಗೂ ಆ ಹಣ ಸ್ಥಳೀಯ ಶಾಸಕರಿಗೆ ಹೋಗುತ್ತಿದೆ ಎಂಬ ಆಡಿಯೋವೊಂದು ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ಸಾಮಾಜಿಕ ಕಾರ್ಯಕರ್ತ ಹೆಚ್.ಎಮ್ ವೆಂಕಟೇಶ್‍ಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದಲೇ ನೋಟೀಸ್ ಮೇಲೆ ನೋಟೀಸ್ ಜಾರಿ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿ ಮಾತಾಡಿರುವ ವೆಂಕಟೇಶ್, ವ್ಯಾಕ್ಸಿನ್ ಕೇಳುವುದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಓದಿ: ಶಿಲ್ಪಾ ನಾಗ್‍ರಂತಹ ದಕ್ಷ ಅಧಿಕಾರಿಗಳ ಸೇವೆ ಅಗತ್ಯ, ಸಿಎಂ ಗಮನಕ್ಕೆ ತರುತ್ತೇನೆ: ರಾಮ್‍ದಾಸ್

ವೀಡಿಯೋದಲ್ಲಿ ಮೇ 28 ರಂದು ಅನುಗ್ರಹ ಆಸ್ಪತ್ರೆಗೆ ಪೊಲೀಸ್ ಮಾಡಿ ವ್ಯಾಕ್ಸಿನ್ ಬೇಕು ಅಂತ ಕೇಳಿದ್ದೆ. ವ್ಯಾಕ್ಸಿನ್ ಒಂದಕ್ಕೆ 900 ರೂ. ಕೊಡಲು ಕಷ್ಟ ಆಗುತ್ತೆ ಅಂದಾಗ, ಆಸ್ಪತ್ರೆ ಸಿಬ್ಬಂದಿಯೇ 700 ರೂ. ಸ್ಥಳೀಯ ಶಾಸಕರಿಗೆ ಹೋಗುತ್ತದೆ. 200 ರೂ. ಮಾತ್ರ ಆಸ್ಪತ್ರೆಗೆ ಸಿಗುತ್ತದೆ ಎಂದಿದ್ದರು. ಹೀಗೆ ವ್ಯಾಕ್ಸಿನ್ ಬಿಬಿಎಂಪಿ ಕಚೇರಿಯಿಂದ ಶಾಸಕರ ಕಚೇರಿಗೆ ಬರುತ್ತದೆ ಎಂದು ಅವರೇ ಹೇಳಿದ್ದು, ಯಾವ ರೀತಿ ಮಾರಾಟ ಆಗ್ತಿದೆ ಎಂಬ ಬಗ್ಗೆ ವಿವರಿಸಿದ್ದರು.

ತಾನು ಯಾರ ಮೇಲೆಯೂ ಆರೋಪ ಮಾಡಿಲ್ಲ. ದುರುದ್ದೇಶದಿಂದ ಯಾರನ್ನೂ ಸಿಕ್ಕಿಸಿಹಾಕಲು ಮಾಡಿದ ಕೆಲಸವೂ ಅಲ್ಲ. ಆದರೆ ಹೆಚ್ಚು ದುಡ್ಡು ಕೇಳುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆದ ನಂತರ, ಸ್ಥಳೀಯ ಶಾಸಕರು ನನ್ನ ಮೇಲೆ ಗರಂ ಆದರು, ಏಕವಚನದಲ್ಲಿ ಬೈದಾಡಿದರು. ಇದರಿಂದ ರಕ್ಷಣೆ ಕೊಡಿ ಎಂದು ಮೇ 29 ರಂದೇ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಜೊತೆಗೆ ವ್ಯಾಕ್ಸಿನ್ ಮಾರಾಟದ ಬಗ್ಗೆ ತನಿಖೆ ನಡೆಸುವಂತೆ ಗಿರಿನಗರ, ಬಸವನಗುಡಿ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದೆ. ಇದನ್ನು ಓದಿ: ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ-ಬಿ.ಸಿ ಪಾಟೀಲ್

ಆದರೆ ಮಾರನೇ ದಿನ ಗಿರಿನಗರ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರು ಮನೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡದ್ದಾರೆ. ಯಾವುದೇ ರೀತಿ ತಪ್ಪು ಮಾಡದಿದ್ದರೂ ವಿಚಾರಣೆಗೆ ಬರಬೇಕೆಂದು ನನಗ್ಯಾಕೆ ನೋಟೀಸ್ ಕೊಟ್ಟಿದ್ದೀರಾ ಎಂದು ಕೇಳಿದಾಗ ಬೇರೆಯವರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎಂದಿದ್ದಾರೆ.

ಕೋವಿಡ್ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದಾಗ, ಪೊಲೀಸ್ ಮೂಲಕವೂ ನಿರಂತರವಾಗಿ ವಿಚಾರಣೆಗೆ ಬನ್ನಿ ಎಂದು ಒತ್ತಡ ಹಾಕುತ್ತಿದ್ದಾರೆ. ಎರಡು ನೋಟೀಸ್‍ಗಳಿಗೂ ವಿವರವಾದ ಮಾಹಿತಿ, ಉತ್ತರವನ್ನು ಇ-ಮೈಲ್‍ಗೆ ಕಳಿಸಲಾಗಿದೆ. ಇಷ್ಟಾದರೂ ಮತ್ತೆ ಫೋನ್ ಮಾಡಿ ಸ್ಟೇಷನ್‍ಗೆ ಬರುವಂತೆ ಹೇಳಿದ್ದಾರೆ. ಜೊತೆಗೆ ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ, ಕೊಟ್ಟಿಲ್ಲ ಎಂದು ಹೇಳುತ್ತಾರೆ. ಇದರಲ್ಲಿ ಏನೋ ಷಡ್ಯಂತ್ರ ಮಾಡಿ ಸಿಕ್ಕಿಹಾಕಿಸುವ ಕೆಲಸ ನಡೆಯುತ್ತಿದೆ. ಗಿರಿನಗರ ಪೊಲೀಸ್ ಠಾಣೆಯವರು ಖಾಸಗಿ ವಾಹನದಲ್ಲಿ ಬಂದು ಮತ್ತೆ ನೋಟೀಸ್ ಜಾರಿ ಮಾಡಿದ್ದಾರೆ. ಈಗಾಗಲೇ ಉತ್ತರ ಕೊಟ್ಟಿರುವುದರಿಂದ ಮತ್ತೆ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದರೂ, ಗಿರಿನಗರ ಹಾಗೂ ಕುಮಾರಸ್ವಾಮಿ ಪೊಲೀಸ್ ಠಾಣೆಯಿಂದ ತುಂಬಾ ಕಿರುಕುಳ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

ಆರೋಪಕ್ಕೆ ಒಳಗಾದವರ ಮೇಲೆ ತನಿಖೆ ನಡೆಯುತ್ತಿಲ್ಲ. ಆದರೆ ವ್ಯಾಕ್ಸಿನ್ ಕೇಳಿದ್ದಕ್ಕೆ ನನಗೆ ನೋಟೀಸ್ ಕೊಡುತ್ತಿದ್ದಾರೆ. ಆಸ್ಪತ್ರೆ ಕಂಪ್ಲೈಂಟ್ ಅನ್ನೂ ನನ್ನಿಂದ ಮುಚ್ಚಿಡಲಾಗಿದೆ. ಹೀಗಾಗಿ ವ್ಯಾಕ್ಸಿನೇಷನ್ ಕೇಳಿದ್ದೇ ತಪ್ಪಾ. ಈ ಷಡ್ಯಂತ್ರವನ್ನು ಎಲ್ಲರೂ ಗಮನಿಸಬೇಕಿದೆ. ನಾನೂ ಕಾನೂನು ಹೋರಾಟ ಮುಂದುವರಿಸುತ್ತೇನೆ. ಬಡವರು, ನಿರ್ಗತಿಕರ ಪರವಾಗಿ ನಿಂತು ಎಲ್ಲರೂ ವ್ಯಾಕ್ಸಿನ್ ಮಾರಾಟದ ವಿರುದ್ಧವಾಗಿ ಹೋರಾಡಬೇಕಿದೆ. ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗುವುದಿಲ್ಲ, ನ್ಯಾಯಾಂಗ ತನಿಖೆಗೆ ಒತ್ತಾಯಿಸಬೇಕಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *