ವ್ಯಕ್ತಿ ಪೂಜೆಯೂ ಬೇಡ , ಪಕ್ಷ ಪೂಜೆ ಮಾಡೋಣ: ಡಿಕೆ ಶಿವಕುಮಾರ್‌

Public TV
2 Min Read

– ಜಾತಿ, ಧರ್ಮದಲ್ಲಿ ನಂಬಿಕೆ ಇಲ್ಲ. ನಮ್ಮದು ಕಾಂಗ್ರೆಸ್ ಗುಂಪು
– ಕೇರಳ ಮಾದರಿಯನ್ನು ಅನುಸರಿಸಲು ಕರೆ

ಬೆಂಗಳೂರು: ವ್ಯಕ್ತಿ ಪೂಜೆಯೂ ಬೇಡ . ಪಕ್ಷ ಪೂಜೆ ಮಾಡೋಣ. ಈ ಮೂಲಕ ಪಕ್ಷವನ್ನು ಕಟ್ಟೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರತಿಜ್ಞಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಹಿಂಬಾಲಕರು ಬೇಡ. ನನಗೆ ಯಾವುದೇ ಗುಂಪು ಜಾತಿ, ಧರ್ಮದಲ್ಲಿ ನಂಬಿಕೆ ಇಲ್ಲ. ನಮ್ಮದು ಕಾಂಗ್ರೆಸ್ ಗುಂಪು, ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ ಎಂದು ತಿಳಿಸಿದರು.

ಕೇರಳ ಮಾದರಿಯಲ್ಲಿ ಎಲ್ಲಾ ನಾಯಕರು ಮೊದಲು ಬೂತ್‌ ಮಟ್ಟದಿಂದ ಬರುವ ವ್ಯವಸ್ಥೆ ಮಾಡಬೇಕು. ನಾವು ಅದನ್ನು ಅನುಸರಿಸುತ್ತೇವೆ. ನೀವು ಶಕ್ತಿಯಾದ್ರೆ ಅದು ಕಾಂಗ್ರೆಸ್‌ ಶಕ್ತಿ. ನೀವು ದುರ್ಬಲರಾದರೆ ಕಾಂಗ್ರೆಸ್‌ ದುರ್ಬಲವಾಗುತ್ತದೆ. ಹೀಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ನನ್ನನ್ನು ಕನಕಪುರದ ಬಂಡೆ ಎಂದು ಕರೆಯುತ್ತಿದ್ದಾರೆ. ಬಂಡೆ ಉಳಿ ಬಿದ್ದರೆ ಚಪ್ಪಡಿಯೂ ಆಗುತ್ತದೆ. ದ್ವಾರದಲ್ಲಿರುವ ಕಂಬವೂ ಆಗುತ್ತದೆ. ನಾನು ಬಂಡೆಯಾಗಲು ಇಷ್ಟ ಪಡುವುದಿಲ್ಲ. ಉಳಿ ಏಟು ತಿಂದು ವಿಧಾನಸೌಧದ ಚಪ್ಪಡಿ ಆದರೆ ಸಾಕು. ಅದನ್ನ ತುಳಿದು ನೀವು ವಿಧಾನಸೌಧದ ಒಳಗೆ ಹೋಗುವಂತಾಗಬೇಕು ಎಂದರು.

5 ಬೆರಳು ಸೇರಿದರೆ ಈ ಹಸ್ತ. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟವನು. ಜೊತೆಗೂಡುವುದು ಆರಂಭ. ಜೊತೆಗೂಡಿ ಯೋಚಿಸುವುದು ಪ್ರಗತಿ. ಜೊತೆಗೂಡಿ ಆಗುವುದು ಅಭಿವೃದ್ಧಿ. ನಾನು ಮೊದಲು ಕಾರ್ಯಕರ್ತ ಆಮೇಲೆ ಈ ಸ್ಥಾನ. ನುಡಿದಂತೆ ನಡೆದಿದ್ದೇನೆ. ನಾನು ಯಾರಿಗೂ ದ್ರೋಹ ಮಾಡಿಲ್ಲ. ಬಂಗಾರಪ್ಪ, ಕೃಷ್ಣ, ಧರ್ಮ ಸಿಂಗ್, ಸಿದ್ದರಾಮಯ್ಯ ಎಲ್ಲರ ಜೊತೆ ಕೆಲಸ ಮಾಡಿದ್ದೇನೆ. ಆದರೆ ಯಾರಿಗೂ ದ್ರೋಹ ಮಾಡಿಲ್ಲ ಎಂದು ಹೇಳಿದರು.

ಸೋನಿಯಾ ಗಾಂಧಿಯವರು ಅಪಾರವಾದ ನಂಬಿಕೆ ಇಟ್ಟು ನನಗೆ ಜವಬ್ದಾರಿ ಕೊಟ್ಟಿದ್ದಾರೆ. ನನಗೆ ಈ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಇದರ ಜೊತೆಗೆ ಬರುವ ಸ್ಥಾನಮಾನದ ಹಂಬಲವು ಇಲ್ಲ. ನನಗೆ ಈ ಶಕ್ತಿ ಕೊಟ್ಟಾಗ ನೀವೆಲ್ಲಾ ಅತ್ತಿದ್ದೀರಿ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಡಿಕೆಶಿ ರಾಜಕೀಯ ಇತಿಹಾಸ ಮುಗಿತು ಎನ್ನುವಾಗ ತಿಹಾರ್ ಜೈಲಿಗೆ ಬಂದು 1 ಗಂಟೆ ಕಾಲ ಮಾತನಾಡಿ ನಿನ್ನ ಜೊತೆಗೆ ನಾನಿದ್ದೇನೆ ಪಕ್ಷದ ಜವಾಬ್ದಾರಿ ತೆಗೆದುಕೋ ಎಂದು ಹೇಳಿದರು. ನಾನು ಅನೇಕ ಕಷ್ಟ ಎದುರುಸಿದ್ದೇನೆ. ಆದರೆ ಯಾವುದು ಸ್ಬಂತಕ್ಕಾಗಿ ಅಲ್ಲ. ಪಕ್ಷದ ವಿಷಯದಲ್ಲಿ ನಾನು ಯಾವತ್ತು ಚಕಾರ ಎತ್ತಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *