ಅಫ್ರಿದಿಗೆ ಸಹಾಯ, ಧೋನಿಗೆ ವ್ಯಂಗ್ಯ- ಬಜ್ಜಿ ವಿರುದ್ಧ ಧೋನಿ ಫ್ಯಾನ್ಸ್ ಫೈರ್

Public TV
2 Min Read

ಮುಂಬೈ: ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಅಂಪೈರ್ ವೈಡ್ ನೀಡಲು ಮುಂದಾಗಿ ಧೋನಿ ಆಕ್ಷೇಪ ವ್ಯಕ್ತಪಡಿಸುತ್ತದಂತೆ ತೀರ್ಮಾನ ಬದಲಿಸಿದ್ದ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಸದ್ಯ ಈ ಕುರಿತಂತೆ ಹರ್ಭಜನ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ಪಂದ್ಯದ ಬಳಿಕ ಸನ್‍ರೈಸರ್ಸ್ ಯುವ ಕ್ರಿಕೆಟಿಗರಿಗೆ ಧೋನಿ ಕೆಲ ಸಲಹೆಗಳನ್ನು ನೀಡಿದ್ದರು. ಈ ಕುರಿತಂತೆ ಹೈದರಾಬಾದ್ ತಂಡದ ಆಟಗಾರ ಅಬ್ದುಲ್ ಸಮದ್, ಫೋಟೋವನ್ನು ಟ್ವೀಟ್ ಮಾಡಿ ‘ಇಂಪಾರ್ಟೆಂಟ್ ಲೆಸೆನ್ಸ್’ ಎಂಬ ಹಣೆಬರಹ ನೀಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಅಭಿಮಾನಿಯೊಬ್ಬ ‘ಯೆಸ್’ ಎಂದು ಪಂದ್ಯದಲ್ಲಿ ಅಂಪೈರ್ ತೀರ್ಮಾನ ಬದಲಿಸಿದ್ದ ಕುರಿತ ವಿಡಿಯೋವನ್ನು ರೀ ಟ್ವೀಟ್ ಮಾಡಿದ್ದರು. ಅಭಿಮಾನಿಯ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಹರ್ಭಜನ್ ಸಿಂಗ್, ನಗುವ ಎಮೋಜಿ ನೀಡಿ ರೀ ಟ್ವೀಟ್ ಮಾಡಿದ್ದರು.

ಹರ್ಭಜನ್ ಸಿಂಗ್ ನಗುವ ಎಮೋಜಿಗಳೊಂದಿಗೆ ಪ್ರತಿಕ್ರಿಯೆ ನೀಡಿದಕ್ಕೆ ಧೋನಿ ತಂಡದ ಅಭಿಮಾನಿಗಳು ಫುಲ್ ಗರಂ ಆಗಿದ್ದು, ನಂಬಿಕೆ ದ್ರೋಹಿ ಎಂದು ಟೀಕೆ ಮಾಡಿ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸತತ ಎರಡು ವರ್ಷ ಚೆನ್ನೈ ತಂಡದ ಪರ ಆಡಿ ಈ ರೀತಿ ಪ್ರತಿಕ್ರಿಯೆ ನೀಡುವುದು ಎಷ್ಟು ಎಂದು ಕೆಲ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಇದೇ ವೇಳೆ ಲಾಕ್‍ಡೌನ್ ಸಂದರ್ಭದಲ್ಲಿ ಪಾಕಿಸ್ತಾನ ಮಾಜಿ ಆಟಗಾರ ಶಹೀದ್ ಅಫ್ರಿದಿ ಫೌಂಡೇಶನ್‍ಗೆ ನೆರವು ನೀಡಲು ಟ್ವೀಟ್ ಮಾಡಿ ಮನವಿ ಮಾಡಿದ್ದ ಹರ್ಭಜನ್ ಸಿಂಗ್ ವಿಷಯವನ್ನು ಪ್ರಸ್ತಾಪ ಮಾಡಿರುವ ಅಭಿಮಾನಿಗಳು, ಆಫ್ರಿದಿಗೆ ಸಹಾಯ ಮಾಡುತ್ತೀಯಾ, ಧೋನಿ ವಿರುದ್ಧ ವ್ಯಂಗ್ಯ ಮಾಡುತ್ತೀಯಾ ಎಂದು ಬಜ್ಜಿ ವಿರುದ್ಧ ಕಿಡಿಕಾರಿದ್ದಾರೆ.

ಪಂದ್ಯದಲ್ಲಿ ಚೆನ್ನೈ ತಂಡ ನೀಡಿದ್ದ 167 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ್ದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 147 ರನ್ ಗಳಷ್ಟೇ ಗಳಿಸಿತ್ತು.  ಧೋನಿ ನಾಯಕತ್ವದ ತಂಡ 20 ರನ್‍ಗಳ ಗೆಲುವು ಪಡೆದಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *