ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ಫಲಿತಾಂಶ ಘೋಷಣಾ ಪ್ರಕ್ರಿಯೆಯಲ್ಲಿ ಆಯಾ ವಿದ್ಯಾರ್ಥಿಗಳ ಪ್ರಥಮ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಅಂಕಗಳನ್ನು ಮಾನದಂಡಗಳಾಗಿ ಪರಿಗಣಿಸಲಾಗುತ್ತಿದ್ದು, ವೃತ್ತಿಪರ ಕೋರ್ಸ್‍ಗೆ ಪ್ರವೇಶ ಕಲ್ಪಿಸುವ ಸಿಇಟಿ ಪರೀಕ್ಷೆಗೆ ಪಿಯುಸಿ ಫಲಿತಾಂಶ ಪರಿಗಣಿಸಿ ವೇಟೇಜ್ ನೀಡುವ ಪ್ರಕ್ರಿಯೆಯನ್ನು ಕೈಬಿಟ್ಟು, ಕೇವಲ ಸಿ.ಇ.ಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರ್ಯಾಂಕಿಂಗ್‍ಗೆ ಪರಿಗಣಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ಥನಾರಾಯಣ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?
ದಿನಾಂಕ 04.06.2021ರಂದು ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಪಡಿಸುವ ತೀರ್ಮಾನವನ್ನು ನಾವು ತೆಗೆದುಕೊಂಡಿದ್ದೇವೆ. ಕೋವಿಡ್ ಪ್ರಸರಣದ ತೀವ್ರತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಗಳ ನಡುವೆ ಸಮತೋಲನ ತರಲು ಈ ರೀತಿಯ ನಿರ್ಧಾರವು ಅವಶ್ಯಕವಾಗಿತ್ತು. ಹೀಗಾಗಿ ಈ ನಿರ್ಧಾರ ಮಾಡಲಾಗಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ತೇರ್ಗಡೆ ಮಾಡುವ ನಿರ್ಧಾರದ ಹಿಂದೆ ನಾವು ನಿರ್ದಿಷ್ಟವಾದ ತರ್ಕವನ್ನು ಅನುಸರಿಸಿದ್ದೇವೆ. ಈ ವಿದ್ಯಾರ್ಥಿಗಳ ಮೊದಲ ಪಿಯುಸಿ ಅಂಕಗಳಲ್ಲದೇ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನೂ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯವನ್ನು ಸೇರ್ಪಡಿಸಿ ಗ್ರೇಡಿಂಗ್ ಫಲಿತಾಂಶವನ್ನು ನೀಡಲು ಸಹ ನಿರ್ಧಾರ ಮಾಡಿದ್ದೇವೆ. ಅಲ್ಲದೇ ಯಾವುದೇ ವಿದ್ಯಾರ್ಥಿಯು ತನ್ನ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದೇ ಇದ್ದಲ್ಲಿ ಕ್ಲಪ್ತ ಸಮಯದಲ್ಲಿ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆಯೆಂದೂ ಘೋಷಿಸಿದ್ದೇವೆ. ಇಂದಿನ ಸಂದರ್ಭದಲ್ಲಿ ಇದಕ್ಕಿಂತ ಪ್ರಸ್ತುತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ. ಇದನ್ನೂ ಓದಿ:ದ್ವಿತೀಯ ಪಿಯುಸಿ ಪಾಸ್‍ಗೆ ಹೊಸ ಮಾನದಂಡ ಪ್ರಕಟ – ಪಬ್ಲಿಕ್ ಟಿವಿ ಸಲಹೆ ಸ್ವೀಕರಿಸಿದ ಶಿಕ್ಷಣ ಇಲಾಖೆ
ಸಾಮಾನ್ಯವಾಗಿ ದ್ವಿತೀಯ ಪಿಯು ಅಂಕಗಳನ್ನು ಸಿಇಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ವೇಟೇಜ್ ಕಲ್ಪಿಸುವ ಮೂಲಕ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಈ ಬಾರಿಯ ಗ್ರೇಡಿಂಗ್ ಫಲಿತಾಂಶವು ವಿದ್ಯಾರ್ಥಿಗಳ ಪ್ರತಿಭೆಯನ್ನು ಖಚಿತವಾಗಿ ವ್ಯಕ್ತಪಡಿಸಿದರೂ ಅವರಿಗೆ ಅದನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಿದೆ. ಹಾಗಾಗಿ, ಈ ಬಾರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಸಿಇಟಿ ಪರೀಕ್ಷೆಗೆ ಗಣನೆಗೆ ತೆಗೆದುಕೊಳ್ಳುವಾಗ, ಈ ಫಲಿತಾಂಶವನ್ನು ಪ್ರಶ್ನಿಸಿ ಇನ್ನೊಮ್ಮೆ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ.ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈ ಬಾರಿಗೆ ಸೀಮಿತಗೊಂಡಂತೆ ತಮ್ಮ ಇಲಾಖೆಯು ನಡೆಸಲು ಉದ್ದೇಶಿಸಿರುವ ವೃತ್ತಿಪರ ಕೋರ್ಸ್ ದಾಖಲಾತಿಗೆ ಸಂಬಂಧಿಸಿದ ಸಿಇಟಿ ಪರೀಕ್ಷೆಗೆ ವೇಟೇಜ್ ನೀಡುವ ಪ್ರಕ್ರಿಯೆಯನ್ನು ತಾವು ಕೈಬಿಟ್ಟು, ಕೇವಲ ಸಿಇಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರ್ಯಾಂಕಿಂಗ್‍ಗೆ ಪರಿಗಣಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿ ತಮ್ಮನ್ನು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.