ವೀಡಿಯೋ- ಮನೆ ಟೆರೆಸ್‍ನಲ್ಲಿ ನೇತಾಡ್ತಿದ್ದ ಬಾಲಕನ ರಕ್ಷಿಸಿದ ಬೀದಿ ಬದಿ ವ್ಯಾಪಾರಿ

Public TV
2 Min Read

– ಮನೆ ಮೇಲಿಂದ ಬಿದ್ದ ಬಾಲಕನ ಕ್ಯಾಚ್ ಹಿಡಿದು ರಕ್ಷಣೆ

ಚೆನ್ನೈ: ಬಾಲಕ ಮನೆಯ ಟೆರೆಸ್ ಮೇಲೆ ತೆರಳಿದ್ದು, ಈ ವೇಳೆ ಗೋಡೆಗೆ ನೇತಾಡುತ್ತಿದ್ದ. ಇದನ್ನು ಗಮನಿಸಿದ ಬಾಲಕಿ, ಟೆರೆಸ್ ಮೇಲೆಯೇ ಬಾಲಕನ ಕೈ ಹಿಡಿದು ಎಳೆಯಲು ಯತ್ನಿಸಿದ್ದಾಳೆ ಆದರೆ ಸಾಧ್ಯವಾಗಿಲ್ಲ. ಇದೇ ಸಮಯಕ್ಕೆ ಬಂದ ಬೀದಿ ಬದಿ ವ್ಯಾಪಾರಿ ಮನೆಯ ಮೇಲಿಂದ ಬಿದ್ದ ಬಾಲಕನನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ. ಈ ಮೈ ಜುಮ್ ಎನ್ನಿಸುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ತಿರುಚ್ಚಿ ಬಳಿ ಘಟನೆ ನಡೆದಿದ್ದು, ಟೆರೆಸ್ ಮೇಲೆ ನೇತಾಡುತ್ತಿದ್ದ ಬಾಲಕನನ್ನು ಬೀದಿ ಬದಿ ವ್ಯಾಪಾರಿ ರಕ್ಷಿಸಿದ್ದಾರೆ. ಮನೆಯ ಟೆರೆಸ್‍ನ ಮೂಲೆಗೆ ತೆರಳಿ ಗೋಡೆಯನ್ನು ಹಿಡಿದು ಬಾಲಕ ನೇತಾಡುತ್ತಿದ್ದ. ಆತನ ಸಹೋದರಿ ಬಾಲಕನ ಕೈ ಹಿಡಿದು ಮೇಲಿಂದ ಎಳೆಯಲು ಯತ್ನಿಸುತ್ತಿದ್ದಳು. ಈ ವೇಳೆ ಕೆಲವೇ ಸೆಕೆಂಡುಗಳಲ್ಲಿ ವ್ಯಕ್ತಿಯೊಬ್ಬರು ಮನೆ ಬಳಿಗೆ ಓಡೋಡಿ ಬಂದಿದ್ದಾರೆ.

ಮನೆಯ ಬಳಿ ಬಂದ ವ್ಯಕ್ತಿ ಟೆರೆಸ್ ಕೆಳಗೆ ನಿಂತಿದ್ದು, ಈ ವೇಳೆ ಮಗುವನ್ನು ತನ್ನ ತೋಳುಗಳ ಮೂಲಕ ಕ್ಯಾಚ್ ಹಿಡಿಯುವ ರೀತಿ ನಿಂತಿದ್ದಾರೆ. ಈ ವೇಳೆ ಬಾಲಕನ ಸಹೋದರಿ ಆತನ ಕೈ ಬಿಟ್ಟಿದ್ದಾಳೆ. ಬಾಲಕ ಸುರಕ್ಷಿತವಾಗಿ ವ್ಯಕ್ತಿಯ ತೋಳಿನಲ್ಲಿ ಬಂದು ಸೇರಿದ್ದಾನೆ.

ಬಾಲಕನನ್ನು ಮಣಪ್ಪರೈ ಸಮೀಪದ ಪಾಲಕೊಟ್ಟೈ ಗ್ರಾಮದವ ನಾಲ್ಕು ವರ್ಷದ ಎಡ್ರಿಕ್ ಎಝಿಲ್ ಎಂದು ಗುರುತಿಸಲಾಗಿದ್ದು, ಬಾಲಕನ ಸಹೋದರಿ 6 ವರ್ಷದ ಕವಿ ಎನ್ನಲಾಗಿದೆ. ಮಗುವಿನ ಪೋಷಕರಾದ ಜಾನ್ ಪೀಟರ್ ಹಾಗೂ ಜಾನ್ಸಿ ಮೇರಿ ಕೆಲಸ ನಿಮಿತ್ತ ಹೊರಗೆ ಹೋದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಘಟನೆ ಹೇಗಾಯ್ತು?
ಅಕ್ಕ-ತಮ್ಮ ಇಬ್ಬರೂ ಟೆರೆಸ್ ಮೇಲೆ ಆಟವಾಡಲು ತೆರಳಿದ್ದಾರೆ. ಈ ವೇಳೆ ಎಝಿಲ್ ಇದ್ದಕ್ಕಿದ್ದಂತೆ ರೇಲಿಂಗ್ ಬಳಿ ಜಾರಿದ್ದಾನೆ. ನಂತರ ಗೋಡೆಯನ್ನು ಹಿಡಿದು ನೇತಾಡುತ್ತಿದ್ದ. ಕವಿ ತನ್ನ ಸಹೋದರ ಗೋಡೆಯ ಅಂಚಿನಲ್ಲಿ ನೇತಾಡುತ್ತಿದ್ದುದನ್ನು ಕಂಡು ತಕ್ಷಣವೇ ಅವನ ಕೈಗಳನ್ನು ಹಿಡಿದು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲು ಯತ್ನಿಸಿದ್ದಾಳೆ. ಅಲ್ಲದೆ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿಯುವಲ್ಲಿ ಸಹ ಯಶಸ್ವಿಯಾಗಿದ್ದಾಳೆ. ನಂತರ ನೆರೆ ಹೊರೆಯವರು ಬರುವಂತೆ ಜೋರಾಗಿ ಕಿರುಚಿದ್ದಾಳೆ.

https://www.youtube.com/watch?v=qNL1w4eKDHc&feature=emb_logo

ಅದೃಷ್ಟವೆಂಬಂತೆ ಬೀದಿ ಬದಿ ವ್ಯಾಪಾರಿ ಮೊಹಮ್ಮದ್ ಸಾಲಿಕ್ ಬಾಲಕಿ ಚೀರುವ ಧ್ವನಿಯನ್ನು ಕೇಳಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಮಗುವನ್ನು ರಕ್ಷಿಸಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬಾಲಕನನ್ನು ಕಾಪಾಡುವ ಸಹೋದರಿ ಹಾಗೂ ಬೀದಿ ಬದಿ ವ್ಯಾಪಾರಿಯ ಪ್ರಯತ್ನಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *