ವಿಷ ನೀಡಿ ತಾಯಿ, ಸೋದರಿಯನ್ನ ಚಿರನಿದ್ರೆಗೆ ಕಳಿಸಿದ ಎಂ.ಟೆಕ್ ವಿದ್ಯಾರ್ಥಿ

Public TV
2 Min Read

– ಕ್ರಿಕೆಟ್ ಬೆಟ್ಟಿಂಗ್‍ಗೆ ಹೋಯ್ತು ಎರಡು ಅಮಾಯಕ ಜೀವ

ಹೈದರಾಬಾದ್: ಮನೆಯ ಮಗನೇ ವಿಷ ನೀಡಿ ತಾಯಿ ಮತ್ತು ಸೋದರಿಯನ್ನ ಕೊಲೆಗೈದ ಘಟನೆ ತೆಲಂಗಾಣದ ಮೆಡಚಲ್-ಮಲಕಾಜಗಿರಿಯಲ್ಲಿ ನಡೆದಿದೆ.

23 ವರ್ಷದ ಸಾಯಿನಾಥ್ ರೆಡ್ಡಿ ತಾಯಿ ಮತ್ತು ಸೋದರಿಯನ್ನ ಚಿರನಿದ್ರೆಗೆ ಕಳುಹಿಸಿ ಕತ್ತಲೆ ಕೋಣೆ ಸೇರಿದ್ದಾನೆ. ಸುನಿತಾ (44) ಮತ್ತು ಅನುಜಾ (22) ಮೃತ ದುರ್ದೈವಿಗಳು. ಎಂ.ಟೆಕ್ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಯಿನಾಥ್ ಕ್ರಿಕೆಟ್ ಬೆಟ್ಟಿಂಗ್ ದಾಸನಾಗಿದ್ದನು. ಇದೀಗ ಅದೇ ಕ್ರಿಕೆಟ್ ಬೆಟ್ಟಿಂಗ್ ಗಾಗಿ ತಂಗಿ, ತಾಯಿಯನ್ನ ಕೊಂದು ಜೈಲುಪಾಲಾಗಿದ್ದಾನೆ.

ಹಣ, ಬಂಗಾರ ಕದ್ದ: ಸಾಯಿನಾಥ್ ತಾಯಿಗೆ ಗೊತ್ತಾಗದೇ ಅವರ ಖಾತೆಯಿಂದ ಸುಮಾರು 20 ಲಕ್ಷ ರೂ. ಡ್ರಾ ಮಾಡಿದ್ದಾನೆ. ಎಲ್ಲ ಹಣವನ್ನ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಾಕಿ ಸೋತು ಸುಣ್ಣವಾಗಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಸಾಯಿನಾಥ್ ಮನೆಯಲ್ಲಿದ್ದ 150 ಗ್ರಾಂ ಚಿನ್ನ ಕದ್ದು ಅದನ್ನು ಜೂಜಿನಲ್ಲಿ ಸೋತಿದ್ದಾನೆ.

ಇಬ್ಬರ ಕೊಲೆಗೆ ಪ್ಲಾನ್: ಇನ್ನು ಹಣ ಮತ್ತು ಚಿನ್ನ ಕದ್ದ ವಿಷಯ ಗೊತ್ತಾಗುತ್ತಲೇ ಸುನಿತಾ ಮತ್ತು ಅನುಜಾ ಶಾಕ್ ಆಗಿದ್ದರು. ಹಣ ಮತ್ತು ಚಿನ್ನ ತೆಗೆದುಕೊಂಡು ಬರುವಂತೆ ಸಾಯಿನಾಥ್ ಗೆ ಎಚ್ಚರಿಕೆ ಸಹ ನೀಡಿದ್ದರು. ಆದ್ರೆ ಜೂಜಾಟದಲ್ಲಿ ಎಲ್ಲವನ್ನ ಕಳೆದುಕೊಂಡಿದ್ದ ಸಾಯಿನಾಥ್, ತಂಗಿ ಮತ್ತು ತಾಯಿಯನ್ನ ಕೊಲ್ಲಲು ನಿರ್ಧರಿಸಿದ್ದರು. ಮನೆಯಲ್ಲಿ ಪದೇ ಪದೇ ಹಣದ ವಿಚಾರ ಪ್ರಸ್ತಾಪಿಸುತ್ತಿದ್ದರಿಂದ ಇಬ್ಬರನ್ನ ಚಿರನಿದ್ರೆಗೆ ಕಳುಹಿಸಲು ಸಾಯಿನಾಥ್ ಪ್ಲಾನ್ ಮಾಡಿಕೊಂಡಿದ್ದನು.

ಊಟದಲ್ಲಿ ವಿಷ: ನವೆಂಬರ್ 23ರಂದು ಮಾಡಿದ ಅಡುಗೆಯಲ್ಲಿ ವಿಷ ಸೇರಿಸಿದ್ದಾನೆ. ವಿಷ ಮಿಶ್ರಿತ ಆಹಾರ ಸೇವಿಸಿದ ತಾಯಿ ಮತ್ತು ಸೋದರಿ ಅಸ್ವಸ್ಥಗೊಂಡಾಗ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಅನುಜಾ ನವೆಂಬರ್ 27ರಂದು ಮೃತರಾದ್ರೆ, ತಾಯಿ ಸುನಿತಾ ನವೆಂಬರ್ 28ರಂದು ಗಾಂಧಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೂರು ವರ್ಷಗಳ ಹಿಂದೆ ಆರೋಪಿ ಸಾಯಿನಾಥ್ ತಂದೆ ಮೃತರಾಗಿದ್ದರು. ತಾಯಿ ಮತ್ತು ತಂಗಿ ಜೊತೆ ಸಾಯಿನಾಥ್ ವಾಸವಾಗಿದ್ದನು. ಆರೋಪಿ ಹಲವು ದಿನಗಳಿಂದ ಬೆಟ್ಟಿಂಗ್ ನಲ್ಲಿ ಭಾಗಿಯಾಗುತ್ತಿದ್ದನು. ಇದೇ ಬೆಟ್ಟಿಂಗ್ ಕುಟುಂಬದ ಲಕ್ಷಾಂತರ ರೂಪಾಯಿ ಸೋತಿದ್ದನು. ತಾಯಿ ಮತ್ತು ತಂಗಿ ಹಣ, ಚಿನ್ನ ಕೇಳಿದಾಗ ಇಬ್ಬರನ್ನ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *