ಪ್ರೇಮಿಗಳಿಗೆ ವಿಷ ನೀಡಿ ಕೊಲೆಗೈದು ಬಳಿಕ ಸುಟ್ಟು ಹಾಕಿದ ಕುಟುಂಬಸ್ಥರು!

Public TV
2 Min Read

– ಕಳೆದ ತಿಂಗ್ಳು ಪರಾರಿಯಾಗಿದ್ರು
– ಪೋಷಕರು ಜೊತೆ ಪೊಲೀಸರು ಕಳಿಸಿದ್ದೆ ತಪ್ಪಾಯ್ತು

ರಾಯ್ಪುರ: ಪ್ರೇಮಿಗಳಿಬ್ಬರನ್ನು ಕುಟುಂಬಸ್ಥರೇ ವಿಷ ಕೊಟ್ಟು ಕೊಲೆ ಮಾಡಿರುವ ಘಟನೆ ಚತ್ತೀಸ್‍ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಪ್ರೇಮಿಗಳನ್ನು ಶ್ರೀಹರಿ (21) ಮತ್ತು ಈತನ ಸಂಬಂಧಿಯಾದ ಐಶ್ವರ್ಯಾ (20) ಎಂದು ಗುರುತಿಸಲಾಗಿದೆ. ಇವರಿಬ್ಬರು ಕೃಷ್ಣನಗರದವರಾಗಿದ್ದು, ಈ ಘಟನೆ ಶನಿವಾರ ನಡೆದಿದೆ. ಈಗಾಗಲೇ ಆರೋಪಿಗಳಾದ ಶ್ರೀಹರಿಯ ಚಿಕ್ಕಪ್ಪ ರಾಮು ಮತ್ತು ಐಶ್ವರ್ಯಾಳ ಸಹೋದರ ಚರಣ್ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಯಾದವ್ ತಿಳಿಸಿದ್ದಾರೆ.

ಏನಿದು ಪ್ರಕರಣ?
ಕಳೆದ ತಿಂಗಳು ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರು ತಮ್ಮ ಮನೆಗಳಿಂದ ಓಡಿಹೋಗಿದ್ದರು. ಇತ್ತ ಇವರ ಕುಟುಂಬವು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದೆ. ನಂತರ ದುರ್ಗ್ ಪೊಲೀಸರು ಚೆನ್ನೈನಲ್ಲಿ ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರನ್ನು ಪತ್ತೆಹಚ್ಚಿದ್ದರು. ಕೂಡಲೇ ಪೊಲೀಸರ ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಅಕ್ಟೋಬರ್ 7 ರಂದು ಇಬ್ಬರನ್ನು ವಾಪಾಸ್ ಕೃಷ್ಣನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ನಂತರ ಇಬ್ಬರನ್ನು ಅವರ ಕುಟುಂಬದವರ ಜೊತೆ ಕಳುಹಿಸಿದ್ದಾರೆ.

ಶನಿವಾರ ರಾತ್ರಿ ಪೊಲೀಸರು ಅವರ ಮನೆಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದಾರೆ. ನಂತರ ವಿಚಾರಣೆಗಾಗಿ ಮನೆಯ ಒಳಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರು ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಕೂಡಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ.

ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳು ಸುಪೇಲಾದಿಂದ 10 ಕಿ.ಮೀ ದೂರದಲ್ಲಿರುವ ಜೆವ್ರಾ ಸಿರ್ಸಾ ಗ್ರಾಮದ ಸಮೀಪ ಶಿವನಾಥ್ ನದಿಯ ದಡದಲ್ಲಿ ಮೃತದೇಹಗಳನ್ನು ಸುಟ್ಟುಹಾಕಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.

ಶ್ರೀಹರಿ ಮತ್ತು ಐಶ್ವರ್ಯಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿದ್ದರು. ಆದರೆ ಎರಡು ಕುಟುಂಬದವರು ಇದಕ್ಕೆ ವಿರುದ್ಧ ವ್ಯಕ್ತಪಡಿಸಿದ್ದಾರೆ. ಭಾಗಶಃ ಸುಟ್ಟ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *