ವಿಷ್ಣುವರ್ಧನ್ ಬಗ್ಗೆ ಮಾತಾಡಿದವನ ಚಳಿ ಬಿಡಿಸಿದ ರಾಖಿ ಭಾಯ್

Public TV
2 Min Read

– ಕ್ಷಮೆ ಕೇಳಿ, ಮಾತು ಹಿಂಪಡೆಯಲು ಆಗ್ರಹ

ಬೆಂಗಳೂರು: ತೆಲುಗು ನಟ ವಿಜಯ್ ರಂಗರಾಜು ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದು, ಇದಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ನಟರಾದ ಜಗ್ಗೇಶ್, ಸುದೀಪ್, ಯಶ್, ಪುನೀತ್ ರಾಜ್ ಕುಮಾರ್ ಆದಿಯಾಗಿ ಬಹುತೇಕ ನಟ, ನಟಿಯರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಕ್ಷಮೆಯಾಚಿಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಯಶ್ ಕಿಡಿಕಾರಿದ್ದು, ಸರಿ ದಾರಿಯಲ್ಲಿ ನಡೆಯುವವರು ಬೆವರುಹರಿಸಿ ಹಂತ ಹಂತವಾಗಿ ಬೆಳೆದು ಹೆಸರು ಮಾಡಿ ಉಳಿದುಕೊಳ್ಳುತ್ತಾರೆ. ಅಡ್ಡದಾರಿಯಲ್ಲಿ ನಡೆಯುವವರು ಅಂತ ಹೆಸರುಗಳನ್ನು ಬಳಸಿಕೊಳ್ಳಲು ಹೋಗಿ ಬದಿಯಲ್ಲೇ ಉಳಿದುಬಿಡುತ್ತಾರೆ ಎಂದಿದ್ದಾರೆ.

ವಿಷ್ಣು ಸರ್ ಕನ್ನಡ ನಾಡು ಕಂಡ ಮಹಾನ್ ಸಾಧಕರು. ಅವರ ಶ್ರಮ, ಪ್ರತಿಭೆ ಹಾಗೂ ನಟನೆಯ ಜೊತೆಗೆ ಬದುಕು ಹಾಗೂ ವ್ಯಕ್ತಿತ್ವದಿಂದ ನಮ್ಮ ಮನೆ, ಮನದಲ್ಲಿ ಅಜರಾಮರವಾಗಿರುವವರು. ಅಂತಹ ಸಾಧಕರನ್ನು ನಿಂದಿಸಿ ಹೆಸರು ಮಾಡ ಬಯಸುವ ಹೀನ ಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ. ಕನ್ನಡ ಚಿತ್ರರಂಗ ಎಲ್ಲ ಚಿತ್ರರಂಗಗಳಜೊತೆ ಪರಸ್ಪರ ಹೊಂದಾಣಿಕೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಅದು ಇಂತಹವರಿಂದ ತಪ್ಪು ದಾರಿಗೆ ಹೋಗಬಾರದು. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Posted by Yash on Saturday, December 12, 2020

ನಟನ ಹೇಳಿಕೆ ಏನು?
ತೆಲುಗು ಚಿತ್ರರಂಗದ ನಟ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ವೈರಲ್ ಆಗಿದೆ. ಇದನ್ನು ಗಮನಿಸಿದ ಸ್ಯಾಂಡಲ್‍ವುಡ್ ತಾರೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ನಟಿಸಿದ್ದಾಗಿ ಹೇಳಿಕೊಂಡಿದ್ದು, ಇದೇ ವೇಳೆ ವಿಷ್ಣುವರ್ಧನ್ ಅವರ ನಡತೆ ಬಗ್ಗೆ ಆಕ್ಷೇಪಣೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅಂದು ವಿಷ್ಣುವರ್ಧನ್ ಕಾಲರ್ ಹಿಡಿದು ಜಗಳ ಮಾಡಿದ್ದಾಗಿ ಸಹ ಹೇಳಿದ್ದಾರೆ. ಹೀಗಾಗಿ ಆಕ್ರೋಶ ಭುಗಿಲೆದ್ದಿದೆ.

ವಿಷ್ಣುಸೇನೆ, ವಿಷ್ಟುವರ್ಧನ್ ಅಭಿಮಾನಿಗಳು ನಟನ ವಿರುದ್ಧ ಹಲವು ಕಡೆ ದೂರು ದಾಖಲಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಸಹ ದೂರು ದಾಖಲಿಸಿಕೊಂಡಿದೆ. ಅಲ್ಲದೆ ಸ್ಯಾಂಡಲ್‍ವುಡ್ ನಟರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಯಶ್ ಈ ಬಗ್ಗೆ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *