ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರ ಸಾವು – ಇಬ್ಬರು ಮಕ್ಕಳ ಸ್ಥಿತಿ ಗಂಭೀರ

Public TV
2 Min Read

ಚಿತ್ರದುರ್ಗ: ವಿಷಯಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಇಸಾಮುದ್ರ ಲಂಬಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ.

ಸೋಮವಾರ ರಾತ್ರಿ 10 ಗಂಟೆಯ ಸಮಯದಲ್ಲಿ ಮುದ್ದೆ ಸೇವಿಸಿರುವ ತಿಪ್ಪನಾಯ್ಕ (45), ಗುಂಡಿಬಾಯಿ (80) ಸುಧಾಬಾಯಿ (40) ಮೃತಪಟ್ಟಿದ್ದು, ರಾಹುಲ್ (19) ಮತ್ತು ರಮ್ಯಾ (16)ರವರ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟುಂಬದ ಸದಸ್ಯರೆಲ್ಲರೂ ಊಟ ಮಾಡಿ ಮಲಗಿದ ಬಳಿಕ ರಾತ್ರಿ ಸುಮಾರು 11:30ಕ್ಕೆ ವಾಂತಿ ಮಾಡಿಕೊಂಡಿದ್ದಾರೆ. ನೆರೆಹೊರೆಯವರು ತಕ್ಷಣ ಇವರನ್ನು ಭರಮಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿ ಗುಂಡಿಬಾಯಿ ಮತ್ತು ಸುಧಾಬಾಯಿ ಮೃತಪಟ್ಟಿದ್ದಾರೆ. ತಿಪ್ಪನಾಯ್ಕ ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮನೆಯಲ್ಲಿ ಮುದ್ದೆ ಸೇವಿಸಿದವರಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಸ್ಥಿತಿ ಗಂಭಿರವಾಗಿದೆ. ಆದರೆ ಅದೃಷ್ಟವಶಾತ್ ಮುದ್ದೆ ಸೇವಿಸದ ರಕ್ಷಿತಾ (17) ಅನ್ನವನ್ನು ಊಟ ಮಾಡಿದ ಪರಿಣಾಮ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಎಸ್‍ಪಿ ಜಿ.ರಾಧಿಕಾ ಅವರು ಬಾಲಕಿಯಿಂದ ಮಾಹಿತಿ ಸಂಗ್ರಹಿಸಿದರು. ಅಲ್ಲದೇ ಜಿಲ್ಲಾ ಆರೋಗ್ಯಧಿಕಾರಿ ಡಾ.ರಂಗನಾಥ್ ಸ್ಥಳಕ್ಕೆ ಭೇಟಿ ನೀಡಿ, ಮೃತರು ಸೇವಿಸಿರುವ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಈ ವೇಳೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿರುವ ಎಸ್‍ಪಿ ರಾಧಿಕಾ ಅವರು ದಿಢೀರ್ ಅಂತ ಒಂದೇ ಮನೆಯಲ್ಲಿ ಈ ರೀತಿ ಆಕಸ್ಮಿಕವಾಗಿ ಮೂವರು ಸಾವಿಗೀಡಾಗಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ವಿಷಾಹಾರ ಸೇವನೆಯೇ ಸಾವಿಗೆ ಕಾರಣ ಎಂದು ಅನುಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಸಹ ಇದೇ ವೇಳೆ ಇವರ ಮನೆಯಲ್ಲಿ ಮೀನು ಸಾಂಬರಿಗೆ ಯಾರೋ ಕಿಡಿಗೇಡಿಗಳು ವಿಷ ಹಾಕಿದ್ದರು ಎಂಬ ಮಾಹಿತಿಯನ್ನು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದು, ಪ್ರಕರಣದ ಸುತ್ತ ಅನುಮಾನ ಮೂಡಿದೆ. ಈ ಸಂಬಂಧ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಯಾವುದೇ ಸೂಕ್ತ ಮಾಹಿತಿ ಇಲ್ಲ. ಇಂತಹ ಪ್ರಕರಣ ಈ ಹಿಂದೆಯೂ ಹಿರಿಯೂರು ತಾಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ನಡೆದಿತ್ತು. ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಆಗ ಅವರ ಸಾವಿಗೆ ಗೋಧಿ ಹಾಗೂ ರಾಗಿಯಲ್ಲಿ ರಾಸಾಯನಿಕ ಗೊಬ್ಬರ ಮಿಶ್ರಣವಾದ ಹಿನ್ನಲೆಯಲ್ಲಿ ಘಟನೆ ನಡೆದಿರುವ ಬಗ್ಗೆ ತಿಳಿದುಬಂದಿತ್ತು. ಹೀಗಾಗಿ ಪ್ರಯೋಗಾಲದ ವರದಿ ಬಂದ ಬಳಿಕ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದಿದ್ದಾರೆ. ಸ್ಥಳಕ್ಕೆ ಎಸ್‍ಪಿ ರಾಧಿಕಾ ಅವರೊಂದಿಗೆ ಹೆಚ್ಚುವರಿ ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಡಿವೈಎಸ್‍ಪಿ ಪಾಂಡುರಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ:ಮುಂದುವರಿದ ಶಶಿಕಲಾ ಜೊಲ್ಲೆಯವರ ಮರಾಠಿ ಭಾಷಾ ಪ್ರೇಮ – ಕನ್ನಡಿಗರು ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *