ವಿಶ್ವಸಂಸ್ಥೆ ಭದ್ರತಾ ಮಂಡಳಿ ಚುನಾವಣೆ – ಭಾರತಕ್ಕೆ 184 ವೋಟ್‌, ಉಳಿದ ರಾಷ್ಟ್ರಗಳಿಗೆ ಎಷ್ಟು ವೋಟ್‌ ಬಿದ್ದಿದೆ?

Public TV
1 Min Read

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡು ವರ್ಷಗಳ ಕಾಲ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ 184 ಮತಗಳು ಬಿದ್ದಿರುವುದು ವಿಶೇಷ. 192 ಸದಸ್ಯ ರಾಷ್ಟ್ರಗಳಿರುವ ಭದ್ರತಾ ಮಂಡಳಿಯಲ್ಲಿ ಸದಸ್ಯ ರಾಷ್ಟ್ರವಾಗಿ ಆಯ್ಕೆ ಆಗಲು ಒಂದು ದೇಶಕ್ಕೆ 128 ರಾಷ್ಟ್ರಗಳ ಬೆಂಬಲ ಬೇಕಿತ್ತು.

2021-22ನೇ ಅವಧಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜೊತೆ ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ದೇಶಗಳು ಸಹ ಸ್ಥಾನ ಪಡೆದಿದೆ. ಚುನಾವಣೆಯಲ್ಲಿ ಖಾಯಂ ರಹಿತ ಸದಸ್ಯ ರಾಷ್ಟ್ರ ಸ್ಥಾನಮಾನ ಬಯಸಿದ್ದ ಕೆನಡಾಗೆ ಸೋಲಾಗಿದೆ. ನಾರ್ವೆಗೆ 130, ಐರ್ಲೆಂಡಿಗೆ 128, ಕೆನಡಾಗೆ 108, ಮೆಕ್ಸಿಕೋಗೆ 187 ಮತಗಳು ಬಿದ್ದಿವೆ.

ಈ ಹಿಂದೆ 1950-51, 1967-68, 1972-73, 1977-78, 1984-85, 1991-92 ಮತ್ತು 2011-12ರಲ್ಲಿ ಸಹ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನವನ್ನು ಭಾರತ ಅಲಂಕರಿಸಿತ್ತು.

ಏಷ್ಯಾ ಪೆಸಿಫಿಕ್‌ ವಲಯದಿಂದ ಭಾರತ ಒಂದೇ ಸ್ಪರ್ಧಿಸಿತ್ತು. ಆಫ್ರಿಕಾ ದೇಶಗಳ ಪೈಕಿ ಕೀನ್ಯಾ ಮತ್ತು ಜಿಬೌಟಿ ದೇಶಗಳು ಸ್ಪರ್ಧಿಸಿತ್ತು. ಈ ಪೈಕಿ ಕೀನ್ಯಾಗೆ 113 ವೋಟ್‌ ಬಿದ್ದರೆ ಜಿಬೌಟಿಗೆ 78 ವೋಟ್‌ ಬಿದ್ದಿದೆ. ಹೀಗಾಗಿ ಮತ್ತೆ ಈ ಚುನಾವಣೆ ನಡೆಯಲಿದೆ.

ಭಾರತಕ್ಕೆ ಏನು ಲಾಭ?
ಭಾರತ ವಿಶ್ವಸಂಸ್ಥೆಯಲ್ಲಿ ಖಾಯಂ ಸ್ಥಾನ ಸಿಗಲು ಪ್ರಯತ್ನಿಸುತ್ತಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 5 ಶಾಶ್ವತ ಸದಸ್ಯ ರಾಷ್ಟ್ರಗಳು ಮತ್ತು 10 ಶಾಶ್ವತ ರಹಿತ ಸದಸ್ಯ ರಾಷ್ಟ್ರಗಳು ಇವೆ. ಸದ್ಯ ಅಮೆರಿಕ, ಚೀನಾ, ಫ್ರಾನ್ಸ್‌, ರಷ್ಯಾ, ಇಂಗ್ಲೆಂಡ್‌ ದೇಶಗಳು ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದು ವಿಶೇಷ ವೀಟೋ ಅಧಿಕಾರವನ್ನು ಹೊಂದಿದೆ. ಈಗ ಭಾರತ ಈ ರಾಷ್ಟ್ರಗಳ ಜೊತೆ ಎರಡು ವರ್ಷಗಳ ಕಾಲ ಕುಳಿತುಕೊಳ್ಳಲಿದೆ. ಎಸ್ಟೋನಿಯಾ, ನೈಜರ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟುನೀಶಿಯಾ ಮತ್ತು ವಿಯೆಟ್ನಾಂ ದೇಶಗಳೂ ಕೂಡ ಇವೆ.

 

Share This Article
Leave a Comment

Leave a Reply

Your email address will not be published. Required fields are marked *