ವಿಶ್ವವಿಖ್ಯಾತ ಮೈಸೂರು ದಸರಾದ ಬಗ್ಗೆ ಗೊಂದಲದಲ್ಲಿರೋ ಮಾವುತರು

Public TV
2 Min Read

ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ನೋಡೋದಕ್ಕೆ ಬಲು ಸುಂದರ. ಈ ದಸರಾದ ಮೆರುಗನ್ನು ಹೆಚ್ಚಿಸುವುದೇ ಜಂಬೂಸವಾರಿ. ಆದರೆ ಕೊರೊನಾ ಮಹಾಮಾರಿಯಿಂದಾಗಿ ದಸರಾಕ್ಕೆ ಆನೆಗಳು ಹೋಗುವುದಕ್ಕೆ ಇಂದಿಗೂ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಮಾವುತರು, ಕಾವಾಡಿಗರು ಗೊಂದಲದಲ್ಲಿದ್ದಾರೆ.

ಪ್ರತಿ ವರ್ಷ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ ಏಳು ಆನೆಗಳು ಭಾಗವಹಿಸಿದ್ದವು. ಸಾಕಾನೆ ಶಿಬಿರದ ಅರ್ಜುನ ಆನೆ ದಸರಾದ ಅಂಬಾರಿಯನ್ನು ಹೊರುತ್ತಿತ್ತು. ದಸರಾಕ್ಕೆ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಆನೆಗಳು ಮೈಸೂರು ಅರಮನೆ ಅಂಗಳದಲ್ಲಿ ಬೀಡು ಬಿಡುತ್ತಿದ್ದವು. ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಇದುವರೆಗೆ ಆನೆಗಳು ಹೋಗಲು ಯಾವುದೇ ಆದೇಶ ಬಂದಿಲ್ಲ.

ಜಂಬೂ ಸವಾರಿಯಲ್ಲಿ ಭಾಗವಹಿಸಬೇಕಾದರೆ, ಆನೆಗಳು ನಿರ್ಭೀತಿಯಿಂದ ಭಾಗವಹಿಸಲು ಅವುಗಳು ಮೈಸೂರಿನಲ್ಲಿ ಪಳಗಬೇಕು. ಅದಕ್ಕಾಗಿ ಕನಿಷ್ಠ ಒಂದು ತಿಂಗಳು ತಾಲೀಮು ನಡೆಸಬೇಕು. ಕೊನೆ ಹಂತದಲ್ಲಿ ಆನೆಗಳನ್ನು ಕರೆದು ತರುವಂತೆ ಹೇಳಿದರೆ ತಾಲೀಮು ಕಷ್ಟವಾಗಬಹುದು. ಒಂದು ವೇಳೆ ಆನೆಗಳನ್ನು ಕರೆತರುವಂತೆ ಹೇಳಿದರೂ, ಮೈಸೂರಿಗೆ ಹೋಗಲು ನಮಗೂ ಆತಂಕವಿದೆ. ನಾವೇನೋ ಮಾಸ್ಕ್ ಗಳನ್ನು ಹಾಕಿಕೊಂಡು ರಕ್ಷಣೆ ಪಡೆಯಬಹುದು. ಆದರೆ ಆನೆಗಳ ರಕ್ಷಣೆಯೇ ಕಷ್ಟ. ಅವುಗಳಿಗೆ ಯಾವ ರೀತಿ ರಕ್ಷಣೆ ಮಾಡುವುದು ಎಂದು ಮಾವುತ ದೋಬಿ ಹೇಳಿದ್ದಾರೆ.

ಪ್ರತೀ ವರ್ಷ ದಸರಾಕ್ಕೆ ಇನ್ನೂ ಮೂರು ತಿಂಗಳಿರುವಾಗಲೇ ಸಂಸಾರ ಸಮೇತರಾಗಿ ಮೈಸೂರಿಗೆ ತೆರಳುತಿದ್ದೆವು. ಬನ್ನಿ ಮಂಟಪ, ಅರಮನೆ ಸೇರಿದಂತೆ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ತಾಲೀಮು ನಡೆಯುತ್ತಿತ್ತು. ಆದರೆ ಈ ಬಾರಿ ಇನ್ನು ಒಂದುವರೆ ತಿಂಗಳಷ್ಟೇ ಬಾಕಿ ಇದ್ದರೂ ಇನ್ನೂ ಆನೆಗಳನ್ನು ಕರೆದೊಯ್ಯಲು ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಪ್ರತೀ ಬಾರಿ ದಸರಾದಲ್ಲಿ ಭಾಗವಹಿಸುತ್ತಿದ್ದ ನಾವು ಈ ಬಾರಿ ದಸರಾದಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ ಎನ್ನುವಂತಾಗಿದೆ ಎಂದರು.

ಜಿಲ್ಲೆಯಿಂದ ಹರ್ಷ, ಅರ್ಜುನ, ಕಾವೇರಿ, ಧನಂಜಯ ಸೇರಿದಂತೆ ಏಳು ಆನೆಗಳು ದಸರಾದಲ್ಲಿ ಭಾಗವಹಿಸುತ್ತಿದ್ದವು. ಆದರೆ ಈ ಭಾರೀ ಆನೆಗಳ ಆಯ್ಕೆ ಕೂಡ ನಡೆದಿಲ್ಲ. ವಿಶ್ವ ವಿಖ್ಯಾತ, ಮೈಸೂರು ದಸರಾಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದ್ದರೂ ದಸರಾದಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಇನ್ನೂ ಆಗಿಲ್ಲ. ಹೀಗಾಗಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ಮಾವುತರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *