ವಿಶ್ವದ ಮೊದಲ ದೇಶ – ನ್ಯೂಜಿಲೆಂಡ್ ಈಗ ಕೊರೊನಾ ಮುಕ್ತ

Public TV
1 Min Read

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಈಗ ಜಗತ್ತಿನ ಕೊರೊನಾ ಮುಕ್ತವಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನ್ಯೂಜಿಲೆಂಡಿನಲ್ಲಿ 1,504 ಪ್ರಕರಣಗಳು(836 ಹೆಂಗಸರು, 668 ಗಂಡಸರು) ಬೆಳಕಿಗೆ ಬಂದಿದ್ದು 22 ಮಂದಿ ಸಾವನ್ನಪ್ಪಿದ್ದಾರೆ. ಇಂದು ಕೊನೆಯ ರೋಗಿ ಆಸ್ಪತ್ರೆಯಿಂದ ಗುಣಮುಖವಾಗುವ ಮೂಲಕ ಕೊರೊನಾ ಮುಕ್ತ ದೇಶವಾಗಿ ಹೊರಹೊಮ್ಮಿದೆ.

ಮುಕ್ತವಾಗಿದ್ದು ಹೇಗೆ?
ಕೊರೊನಾ ವೈರಸ್ ಹಾವಳಿ ವ್ಯಾಪಕವಾಗಲಿದೆ ಎಂಬುದನ್ನು ಮೊದಲೇ ತಿಳಿದು ಮಾರ್ಚ್ 14ರಂದು ವಿದೇಶದಿಂದ ಬಂದವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕೆಂದು ಸರ್ಕಾರ ಸೂಚಿಸಿತ್ತು. ಮಾರ್ಚ್ 19ಕ್ಕೆ 28 ಪ್ರಕರಣಗಳು ವರದಿಯಾದಾಗ ಎಲ್ಲ ವಿದೇಶಿ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಯಿತು. ಮಾರ್ಚ್ 25ಕ್ಕೆ ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಲಾಯಿತು. ಮೇ 13ಕ್ಕೆ ಕೆಲ ವಿನಾಯಿತಿಗಳನ್ನು ನೀಡಿ ಲಾಕ್‍ಡೌನ್ ಮುಂದುವರಿಸಲಾಯಿತು.

49 ಲಕ್ಷ ಜನಸಂಖ್ಯೆಯಿರುವ ನ್ಯೂಜಿಲೆಂಡ್ ನಲ್ಲಿ 2.67 ಲಕ್ಷ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಜನರು ಲಾಕ್‍ಡೌನ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ದರು. ಈ ವಿಚಾರದಲ್ಲಿ ಪ್ರಧಾನಿ ಜೆಸಿಂಡಾ ಅರ್ಡೆನ್ ಖಡಕ್ ನಿರ್ಧಾರಗಳು ಸಹ ಜನರ ಮೆಚ್ಚುಗೆ ಪಾತ್ರವಾಗಿತ್ತು. ಆರೋಗ್ಯ ಸಚಿವ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಕುಟುಂಬದ ಸದಸ್ಯರ ಜೊತೆ ಬೀಚ್ ಗೆ ವಿಹಾರ ಹೋಗಿದ್ದಕ್ಕೆ ಆತನನ್ನು ಸಂಪುಟದಿಂದ ವಜಾಗೊಳಿಸಿ ದಿಟ್ಟ ನಿರ್ಧಾರ ಕೈಗೊಂಡಿದ್ದರು.

ಪ್ರಧಾನಿ ಜೆಸಿಂಡಾ ಅರ್ಡೆನ್ ವಯಸ್ಸು 40. 22ನೇ ವಯಸ್ಸಿಗೆ ಸಂಸತ್‍ಗೆ ಆಯ್ಕೆ ಆಗಿದ್ದ ಜೆಸಿಂಡಾ ಪ್ರಧಾನಿ ಆಗಿದ್ದಾಗ ಬಸುರಿಯಾಗಿ ಮಗಳಿಗೆ ಜನ್ಮ ನೀಡಿದ್ದರು. ಈಗ ಸಾಮಾಜಿಕ ಜಾಲತಾಣದಲ್ಲಿ ಜೆಸಿಂಡಾ ಅವರು ಕೈಗೊಂಡ ಕ್ರಮಗಳನ್ನು ಜನ ಶ್ಲಾಘಿಸುತ್ತಿದ್ದಾರೆ. ಆರಂಭದಲ್ಲೇ ಕೊರೊನಾ ಹರಡಂತೆ ಸರ್ಕಾರ ಕ್ರಮಕೈಗೊಂಡ ಕಾರಣ ನ್ಯೂಜಿಲೆಂಡ್ ಈಗ ವಿಶ್ವದಲ್ಲೇ ಸುದ್ದಿಯಾಗುತ್ತಿದೆ.

 

Share This Article
Leave a Comment

Leave a Reply

Your email address will not be published. Required fields are marked *