ವಿಶೇಷ ಗೋಪಿಚಂದನ ಗಣಪನಿಗೆ ಡಿಮ್ಯಾಂಡ್ – ಪರಿಸರ ಸ್ನೇಹಿಗಳಿಂದ ಹೆಚ್ಚಿದ ಬೇಡಿಕೆ

Public TV
2 Min Read

– ಇದರ ವಿಶೇಷತೆ ಏನು?

ರಾಯಚೂರು: ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬ ಬಂದಿದೆ. ಆದರೆ ಈ ಬಾರಿ ಸಾರ್ವಜನಿಕವಾಗಿ ಅದ್ಧೂರಿ ಗಣೇಶೋತ್ಸವ ಆಚರಿಸುವುದಕ್ಕೆ ಅವಕಾಶ ಇಲ್ಲ. ಕೊರೊನಾ ಮಹಾಮಾರಿ ಹಿನ್ನೆಲೆ ಬಹುತೇಕರು ಮನೆಯಲ್ಲಿ ಗಣೇಶನ ಪ್ರತಿಷ್ಠಾಪಿಸುತ್ತಾರೆ. ಹೀಗಾಗಿ ರಾಯಚೂರಿನ ಪರಿಸರ ಸ್ನೇಹಿ ಗೋಪಿಚಂದನದ ವಿಶೇಷ ಗಣೇಶ ಮೂರ್ತಿಗೆ ಈ ಬಾರಿ ಎಲ್ಲೆಡೆಯಿಂದ ಭಾರೀ ಬೇಡಿಕೆ ಬಂದಿದೆ.

ನಗರದ ಜಯತೀರ್ಥದಾಸರ ಕುಟುಂಬ ಗೋಪಿ ಚಂದನದಿಂದ ಪರಿಸರ ಸ್ನೇಹಿ, ಸಾಂಪ್ರದಾಯಿಕ ಗಣೇಶನನ್ನ ಮಾಡಿ ಮಾರಾಟ ಮಾಡುತ್ತಿದ್ದಾರೆ. ಜಯತೀರ್ಥರ ಮಗ ರಘೋತ್ತಮದಾಸ್ ಇಂಟಿರಿಯರ್ ಡಿಸೈನ್ ಮಾಡುವ ಉದ್ಯೋಗ ಮಾಡುತ್ತಿದ್ದಾರೆ. ಆದರೆ ಗಣೇಶ ಮೂರ್ತಿ ತಯಾರಿಕೆಯಲ್ಲಿ ಆಸಕ್ತಿ ಬಂದು ಮೊದಲು ಮಣ್ಣಿನಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸೋಕೆ ಆರಂಭಿಸಿದರು. ಸಾಮಾನ್ಯವಾಗಿ ಮಣ್ಣಿನ ಗಣೇಶ ಮೂರ್ತಿಗಳನ್ನ ಎಲ್ಲರೂ ಮಾಡುತ್ತಾರೆ. ಆದರೆ ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿರುವ ಗೋಪಿ ಚಂದನದಲ್ಲಿ ಯಾಕೆ ಗಣಪನ ತಯಾರಿಸಬಾರದು ಅಂತ ಕಳೆದ ವರ್ಷದಿಂದ ಪವಿತ್ರವಾದ ಗೋಪಿ ಚಂದನದಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ.

ಗೋಪಿ ಚಂದನವನ್ನ ಶ್ರೀಕೃಷ್ಣನಿಗೆ ಗೋಪಿಕೆಯರು ಹಚ್ಚಿದ್ದರು ಎಂಬ ಪ್ರತೀತಿ ಇದೆ. ಪುರಾಣದಲ್ಲಿ ವಿಶ್ವಂಬರವಾದ ಪರಮಾತ್ಮ ಗಣೇಶನನ್ನು ಗೋಪಿಚಂದನದಲ್ಲಿ ಮಾಡಿದ್ದ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋಪಿ ಚಂದನದಲ್ಲಿ ಗಣೇಶನನ್ನು ಪೂಜಿಸುವುದರಿಂದ ಒಳ್ಳೆಯದಾಗುತ್ತದೆ ಎಂಬ ಭಾವನೆ ಇದೆ. ಕಳೆದ ವರ್ಷದಿಂದ ಗೋಪಿ ಚಂದನದಲ್ಲಿ ಗಣೇಶನ ತಯಾರಿಸಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿದೆ.

ಈಗ ರಾಜ್ಯ ಹಾಗೂ ಹೊರರಾಜ್ಯದಲ್ಲಿ ಗೋಪಿಚಂದನ ಗಣಪನಿಗೆ ಬಹುಬೇಡಿಕೆ ಶುರುವಾಗಿದೆ. 350 ರೂ. ಹಾಗೂ 1,000 ರೂಪಾಯಿ ಬೆಲೆಯ ಎರಡು ಬಗೆಯ ಮೂರ್ತಿಗಳನ್ನ ಮಾರಾಟ ಮಾಡಲಾಗುತ್ತಿದೆ. ಈ ವರ್ಷ 300 ಗಣೇಶ ತಯಾರಿಸಿದ್ದು, ಗುಜರಾತ ಸೇರಿದಂತೆ ಹೊರರಾಜ್ಯದಿಂದ 2,000ಕ್ಕೂ ಅಧಿಕ ಮೂರ್ತಿಗಳ ಬೇಡಿಕೆ ಬಂದಿದೆಯಂತೆ. ಆದರೆ ಇಡೀ ಕುಟುಂಬ ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದರೂ ಬೇಡಿಕೆ ಪೂರೈಸುವುದು ಸಾಧ್ಯವಾಗಿಲ್ಲ.

ಈ ಬಾರಿ ಪರಿಸರ ಸ್ನೇಹಿ ಗಣಪ ಪ್ರತಿಷ್ಠಾಪಿಸಲು ಹೆಚ್ಚು ಜನರು ಮುಂದಾಗಿದ್ದಾರೆ. ಅದರಲ್ಲಿ ಗೋಪಿ ಚಂದನವು ಪಕ್ಕ ಪರಿಸರ ಸ್ನೇಹಿಯಾಗಿದ್ದು, ಗಣೇಶ ಮೂರ್ತಿಯನ್ನ ಬಕೆಟ್‍ನಲ್ಲೆ ವಿಸರ್ಜನೆ ಮಾಡಿ ನಂತರ ಗೋಪಿ ಚಂದನ ಬಳಕೆ ಮಾಡಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *