ವಿವಿಧ ಖಾಸಗಿ ಕಂಪನಿಗಳಿಂದ ಕಿಮ್ಸ್ ಗೆ 570 ಬೆಡ್ ಕೊಡುಗೆ

Public TV
2 Min Read

ಹುಬ್ಬಳ್ಳಿ: ಹುಬ್ಬಳ್ಳಿಯ ಉದ್ಯಮಿ ವಿ.ಎಸ್.ವಿ ಪ್ರಸಾದ್ ಒಡೆತನದ ಸ್ವರ್ಣ ಗ್ರೂಪ್ ಆಫ್ ಕಂಪನಿಸ್, ಹಾಗೂ ದೇಶಪಾಂಡೆ ಫೌಂಡೇಶನ್, ಟಾಟಾ ಹಿಟಾಚಿ, ಟಾಟಾ ಮಾರ್ಕೊಪೊಲೊ ಕಂಪನಿಗಳ ಸಾರ್ವಜನಿಕ ಹೊಣೆಗಾರಿಕೆ ನಿಧಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಇಂದು 570 ಬೆಡ್ ಗಳನ್ನು ಕೊಡುಗೆಯಾಗಿ ನೀಡಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 100 ಆಕ್ಸಿಜನ್ ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ವೇದಾಂತ ಸಂಸ್ಥೆ ಯವರು ಕಿಮ್ಸ್ ಆವರಣದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಕೋವಿಡ್ ರೋಗಿಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಒದಗಿಸಲಾಗುವುದು. ವಾತಾವರಣದಲ್ಲಿನ ಗಾಳಿಯಿಂದ ಆಕ್ಸಿಜನ್ ಹೀರಿ ಬೇರ್ಪಡಿಸಿ ರೋಗಿಗಳಿಗೆ ನೀಡುವ ಯಂತ್ರೋಪಕರಣಗಳನ್ನು ಖರೀದಿಸಲಾಗುತ್ತಿದೆ. ದೇಶದಲ್ಲಿ ಲಾಕ್‍ಡೌನ್ ಹೇರುವ ಬಗ್ಗೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಈ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಬಿಜೆಪಿ ಅಸ್ಸಾಂ ಮತ್ತು ಪಾಂಡಿಚೇರಿಯಲ್ಲಿ ಸರ್ಕಾರ ರಚಿಸುವುದು ಖಚಿತ. ಪಶ್ಚಿಮ ಬಂಗಾಳದಲ್ಲಿ ಉತ್ತಮ ಸ್ಪರ್ಧೆಯನ್ನು ತೋರಿದೆ ಎಂದರು.

ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ರೋಗಿಗಳ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಖಾಸಗಿ ಆಸ್ಪತ್ರೆಯವರಿಗೆ ಸೂಚನೆ ನೀಡಲಾಗಿದೆ. ಬೇರೆ ಜಿಲ್ಲೆಯಿಂದ ಕಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗೆ ಕೋವಿಡ್ ರೋಗಿಗಳು ದಾಖಲಾಗುತ್ತಿದ್ದಾರೆ. ಇಂತಹವರ ಪ್ರಮಾಣ ಶೇ.30 ರಷ್ಟಿದೆ. ಮಾನವೀಯ ದೃಷ್ಟಿಯಿಂದ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಆಸ್ಪತ್ರೆಗಳನ್ನು ಸಶಕ್ತಗೊಳಿಸುವ ಕಾರ್ಯ ನಡೆಯುತ್ತಿದೆ. ಲಸಿಕೆ ಸಂಗ್ರಹ ಹಾಗೂ ವಿತರಣೆಯಲ್ಲಿ ತೊಂದರೆಯಾಗಿದೆ. ಇದನ್ನು ಅರಿಯಬೇಕು. ಮೇ1 ರಂದು ಲಸಿಕೆ ಏಕೆ ನೀಡಿಲ್ಲ ಎಂದು ರಾಜಕೀಯವಾಗಿ ಟೀಕೆ ಮಾಡಬಾರದು. ವಿರೋಧ ಪಕ್ಷದವರು ಹಿಂದೆ ಆಡಳಿತದಲ್ಲಿ ಇದ್ದವರೇ, ಅವರಿಗೆ ಪರಿಸ್ಥಿತಿಗಳ ಬಗ್ಗೆ ಅರಿವು ಇರುತ್ತದೆ. ಇದನ್ನು ಪರಾಮರ್ಶಿಸುವ ಬದಲು ಬೆಳಗಿನಿಂದ ಸಂಜೆವರೆಗೆ ಟೀಕೆ ಮಾಡುವಂತಾಗಬಾರದು ಎಂದರು.

ಬಳಿಕ ಹುಬ್ಬಳ್ಳಿ ಎಪಿಎಂಸಿಗೆ ಭೇಟಿ ನೀಡಿದಾಗ ಸದಸ್ಯರು ಹಾಗೂ ವ್ಯಾಪಾರಿಗಳು ಸಂಜೆಯ ವರೆಗೆ ಮಾರಾಟ ಮಾಡುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ರೈತಾಪಿ ವರ್ಗ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಸಹ ಸಮಯ ಸಾಲುತ್ತಿಲ್ಲ. ಅವುಗಳನ್ನು ಕೊಂಡೊಯ್ದು ಮಾರಾಟ ಮಾಡಲು ಸಮಯ ಸಾಲುತ್ತಿಲ್ಲ. ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಸಡಿಲಿಕೆಗಳನ್ನು ನೀಡಬೇಕಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿದರೆ ಕೊರೊನಾ ಎದುರಿಸಲು ಸಾಧ್ಯವಿದೆ ತಿಳಿಸಿದರು.

ಸ್ವರ್ಣ ಗ್ರೂಪ್ ಆಪ್ ಕಂಪನಿಸ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ ಪ್ರಸಾದ್ ಮಾತನಾಡಿ, ಕಳೆದ ಬಾರಿಯು ಕಂಪನಿಯಿಂದ ಕಿಮ್ಸ್‍ಗೆ ಸಹಾಯ ಒದಗಿಸಲಾಗಿದೆ. ಈ ಬಾರಿಗೆ ನೆರವು ಒದಗಿಸಲು ಕೋರಿದಾಗ ಕೋವಿಡ್ ಆಸ್ಪತ್ರೆಗಳಿಗೆ ಮಂಚ ಹಾಗೂ ಬೆಡ್ ಹಾಸಿಗೆಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಹಾಗಾಗಿ ಕಂಪನಿ ವತಿಯಿಂದ ನಿಂದ 100 ಮಂಚ, ಬೆಡ್, ಬೆಡಶೀಟ್, ತಲೆದಿಂಬು, 100 ಸ್ಟ್ಯಾಂಡ್ ಗಳನ್ನು ನೀಡಲಾಗಿದೆ. ಅವಶ್ಯವಿರುವ ಔಷಧ, ಡಿಸ್ಪೋಜಬಲ್ ಸಿರೆಂಜ್, ಗ್ಲೌಸ್, ಲ್ಯಾಬೋರೇಟರಿ ಅಲ್ಲಿ ಅವಶ್ಯಕವಾದ ಔಷಧೋಪರಣಗಳನ್ನು ಕೇಳಿದ್ದಾರೆ. ಇವುಗಳನ್ನು ಸಹ ವಾರದಲ್ಲಿ ಕೊಡುತ್ತವೆ. 5 ಲಕ್ಷ ವೆಚ್ಚದ 5 ಆಕ್ಸಿಜನ್ ಕಾನ್ಸಟ್ರೇಟರ್ಸ್ ಗಳನ್ನು ಸಹ ಇಂಡಸ್ಟ್ರಿ ಒಕ್ಕೂಟದಿಂದ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಇತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *