ವಿರೋಧ ಪಕ್ಷಗಳು ಹೇಳಿದ್ದನ್ನು ಜಾರಿಗೆ ತಂದಿದ್ದೇವೆ – ದಾಖಲೆ ರಿಲೀಸ್‌ ಮಾಡಿದ ರವಿಶಂಕರ್‌ ಪ್ರಸಾದ್‌

Public TV
2 Min Read

– ವಿರೋಧ ಪಕ್ಷಗಳ ಪ್ರಣಾಳಿಕೆಯಲ್ಲಿ ಉಲ್ಲೇಖ
– ವಿರೋಧಿಸಬೇಕೆಂಬ ಕಾರಣಕ್ಕೆ ವಿರೋಧ

ನವದೆಹಲಿ: ವಿರೋಧ ಮಾಡಬಕೇಂಬ ಉದ್ದೇಶಕ್ಕಾಗಿ ಕಾಂಗ್ರೆಸ್‌ ಮತ್ತು ವಿಪಕ್ಷಗಳು ಕೃಷಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2019ರ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ(ಎಪಿಎಂಸಿ) ಯನ್ನು ರದ್ದುಪಡಿಸುವ /ತಿದ್ದುಪಡಿ ಮಾಡುವ ಭರವಸೆ ನೀಡಲಾಗಿತ್ತು. ಬಿಜೆಪಿ ಈಗ ಮಸೂದೆ ತಂದಿದ್ದಕ್ಕೆ ವಿರೋಧಿಸುವ ಮೂಲಕ ಕಾಂಗ್ರೆಸ್‌ ದ್ವಿಮುಖ ನೀತಿಯನ್ನು ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಯುಪಿಎ ಅವಧಿಯಲ್ಲಿ ಕೃಷಿ ಅಭಿವೃದ್ಧಿಗೆ ಕಾಂಗ್ರೆಸ್‌ ಏನು ಮಾಡಲು ಮುಂದಾಗಿತ್ತೋ ಅದನ್ನೇ ಮೋದಿ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸೋತಿವೆ. ಈಗ ಪ್ರತಿಭಟನೆಗಳಿಗೆ ಬೆಂಬಲ ನೀಡುವ ಮೂಲಕ ಅಸ್ವಿತ್ವ ಉಳಿಸಿಕೊಳ್ಳಲು ಮುಂದಾಗಿವೆ ಎಂದು ಕಿಡಿಕಾರಿದರು.

ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುತ್ತೇವೆ. ರಫ್ತು ಸೇರಿದಂತೆ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುತ್ತೇವೆ ಎಂದು 2019 ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಹೇಳಿತ್ತು. ಈಗ ನಾವು ಜಾರಿಗೆ ತಂದಿದ್ದಕ್ಕೆ ವಿರೋಧಿಸುತ್ತಿದೆ ಎಂದು ಹೇಳಿದರು.

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಶರದ್ ಪವಾರ್ ಅವರು ಕೃಷಿ ಸಚಿವರಾಗಿದ್ದಾಗ 2010ರಲ್ಲಿ ಕೃಷಿ ಮಾರುಕಟ್ಟೆ ಮೂಲಸೌಕರ್ಯದಲ್ಲಿ ಖಾಸಗಿ ವಲಯ ಭಾಗವಹಿಸುವ ಸಂಬಂಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿ ರೈತರಿಗೆ ನೆರವಾಗಲು ಖಾಸಗಿ ವಲಯಗಳು ಪಾಲ್ಗೊಳ್ಳುವಿಕೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಿಳಿಸಿ ಎಂದು ಪತ್ರದ ಬರೆದು ಕೋರಿದ್ದರು. ಆದರೆ ಈಗ ಬಿಜೆಪಿಯನ್ನು ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ರವಿಶಂಕರ್‌ ಪ್ರಸಾದ್‌ ಟೀಕಿಸಿದರು.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಭಾನುವಾರ ಶರದ್‌ ಪವಾರ್‌ ಪತ್ರವನ್ನು ಟ್ವೀಟ್‌ ಮಾಡಿ, 2010ರಲ್ಲಿ ಕೃಷಿಯಲ್ಲಿ ಖಾಸಗಿ ವಲಯಗಳು ಇರಬೇಕೆಂದು ಬೇಡಿಕೆ ಇಟ್ಟು ಪತ್ರ ಬರೆದಿದ್ದರು. ಆದರೆ ಈಗ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

2016ರ ಚುನಾವಣಾ ಪ್ರಚಾರದ ಸಮಯದಲ್ಲಿ ಡಿಎಂಕೆ ಯಾವುದೇ ಮಧ್ಯವರ್ತಿಗಳಿಲ್ಲದೇ ರೈತರು ನೆರವಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೃಷಿ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಮುಂದಾಗುವಂತೆ ಹೊಸ ನೀತಿಯನ್ನು ತರುತ್ತೇವೆ ಎಂದು ಹೇಳಿತ್ತು. ಈ ರೀತಿ ಪ್ರಣಾಳಿಕೆಯಲ್ಲಿ ಘೋಷಿಸಿದ ಡಿಎಂಕೆ ಇಂದು ಭಾರತ ಬಂದ್‌ಗೆ ಕರೆ ನೀಡಿದೆ. ವಿರೋಧ ಪಕ್ಷಗಳು ಅವರಾಗಿಯೇ ಬಯಲಾಗುತ್ತಿದ್ದಾರೆ ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *