ವಿದ್ಯಾವಾಚಸ್ಪತಿ, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ನಿಧನ

Public TV
1 Min Read

ಉಡುಪಿ: ವಿದ್ಯಾವಾಚಸ್ಪತಿ ಬಿರುದಾಂಕಿತ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ(85) ಕೊನೆಯುಸಿರೆಳೆದಿದ್ದಾರೆ. ದೇಶದ ಪ್ರಸಿದ್ಧ ಪ್ರವಚನಕಾರರಾಗಿರುವ ಗೋವಿಂದಾಚಾರ್ಯ, ಸಂಸ್ಕೃತದಲ್ಲಿ ವೇದ ಉಪನಿಷತ್ತಿನ ಆಳ ಅಧ್ಯಯನ ನಡೆಸಿ ಕನ್ನಡಕ್ಕೆ ತರ್ಜುಮೆ ಮಾಡಿದ ಪಂಡಿತರು.

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಿಂದಾಚಾರ್ಯ ಉಡುಪಿಯ ಅಂಬಲಪಾಡಿ ನಿವಾಸದಲ್ಲಿ ಕೊನೆಯುಸಿರೆಳೆದರು. ಕೊನೆಗಾಲದವರೆಗೂ ಅಧ್ಯಯನ ಬರವಣಿಗೆಯಲ್ಲೇ ತೊಡಗಿಸಿಕೊಂಡು ತನ್ನ ಇಡೀ ಜೀವನವನ್ನು ಅಧ್ಯಯನ ಪ್ರವಚನಕ್ಕೆ ಮುಡಿಪಾಗಿಟ್ಟಿದ್ದ ತತ್ವವಾದ ಪರಂಪರೆಯ ದೊಡ್ಡ ಕೊಂಡಿ ಕಳಚಿಕೊಂಡಿದೆ.

ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿ, ಪತ್ರಕರ್ತರಾಗಿ ಅನೇಕ ಅಂಕಣಗಳನ್ನು ಬರೆದಿದ್ದ ಬನ್ನಂಜೆ ನಟ ಡಾ.ವಿಷ್ಣುವರ್ಧನ್ ಆಧ್ಯಾತ್ಮಿಕ ಗುರುವಾಗಿದ್ದರು. ವಿಷ್ಣು ದಾದ ಬನ್ನಂಜೆಯವರ ಪ್ರವಚನದಿಂದ ಪ್ರೇರಣೆ ಪಡೆದು ಆಧ್ಯಾತ್ಮದತ್ತ ಹೊರಳಲು ಕಾರಣರಾಗಿದ್ದರು.

ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲ, ಶೂದ್ರಕನ ಮೃಚ್ಛಕಟಿಕಾ, ಭವಭೂತಿಯ ಉತ್ತಮ ಚರಿತ ಹಾಗೂ ಮಹಾಶ್ವೇತನ ಸಂಸ್ಕೃತ ಕಥೆಗಳನ್ನು , ಸಂಸ್ಕೃತ ಕಾವ್ಯಗಳನ್ನು ಹಲವಾರು ಕೃತಿಗಳನ್ನು ಬನ್ನಂಜೆ ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆಗೈದಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯ ಮೂರು ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.

ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಚಿತ್ರಗಳಿಗೆ ಸಂಪನ್ಮೂಲಕಾರನಾಗಿ ಕೆಲಸ ಮಾಡಿ, ಸಂಭಾಷಣೆ ಬರೆದಿದ್ದರು. ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಕವಿಯಾಗಿರುವ ಗೋವಿಂದಾಚಾರ್ಯರು, ಉಪನಿಷತ್ತಿನ ಅಧ್ಯಾಯಗಳಿಗೆ ಟೀಕೆ, ಟಿಪ್ಪಣಿ ಬರೆದಿದ್ದಾರೆ. ಅಪಾರ ಅಭಿಮಾನಿಗಳನ್ನು, ಬಂಧು ಮಿತ್ರರಿಂದ ದೂರಾಗಿದ್ದಾರೆ. ಮಾಧ್ವ ಪರಂಪರೆಗೆ ಬನ್ನಂಜೆ ಅಗಲುವಿಕೆ ಬಹುದೊಡ್ಡ, ತುಂಬಲಾರದ ನಷ್ಟ.

Share This Article
Leave a Comment

Leave a Reply

Your email address will not be published. Required fields are marked *