ವಿದ್ಯಾರ್ಥಿಗಳೂ ಟ್ಯಾಬ್ ಉಪಯುಕ್ತತೆಯ ಕುರಿತಂತೆ ಹೆಮ್ಮೆಪಟ್ಟಿದ್ದು ಖುಷಿ ತಂದಿತು – ಸುರೇಶ್‍ಕುಮಾರ್

Public TV
2 Min Read

– ಸಚಿವರಿಂದ ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಟ್ಯಾಬ್ ವಿತರಣೆ
– 150 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ

ಬೆಂಗಳೂರು: ಇಂದು ಬೆಂಗಳೂರು ಹೊರವಯಲದ ದೇವನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪಬ್ಲಿಕ್ ಟಿವಿ ಜ್ಞಾನ ದೀವಿಗೆಯ ಟ್ಯಾಬ್ ವಿತರಿಸಿದರು.

ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಸಹಾಯವಾಗಲಿ ಎಂದು ಟ್ಯಾಬ್ ನೀಡಲಾಗುತ್ತಿದೆ. ಕೊರೊನಾ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಲಾಗಿದೆ. ಇದಕ್ಕೆ ಶಿಕ್ಷಣ ಸಚಿವರು ಸಂಪೂರ್ಣ ಸಾಥ್ ನೀಡಿದ್ದು ಫೇಸ್‍ಬುಕ್‍ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಇಂದು ದೇವನಹಳ್ಳಿಗೆ ಭೇಟಿ ನೀಡಿದೆ. ಪಬ್ಲಿಕ್ ಟೀವಿ ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿರುವ ಜ್ಞಾನ ದೀವಿಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಅಭಿಯಾನದಲ್ಲಿ ಈ ತಾಲೂಕಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ದೇವನಹಳ್ಳಿ ಹಾಗೂ ಸರ್ಕಾರಿ ಪ್ರೌಢಶಾಲೆ, ಬಚ್ಚಹಳ್ಳಿ ಈ ಎರಡು ಶಾಲೆಗಳ 150 ವಿದ್ಯಾರ್ಥಿಗಳು ಟ್ಯಾಬ್ ಗಳನ್ನು ಪಡೆದಿದ್ದಾರೆ.

ಈ ಪೈಕಿ ಸುಮಾರು ಹದಿನೈದು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಟ್ಯಾಬ್ ಪ್ರಯೋಜನೆ ಕುರಿತು ಮಾತನಾಡಿದೆ. ಎಲ್ಲ ವಿದ್ಯಾರ್ಥಿಗಳೂ ಟ್ಯಾಬ್ ಉಪಯುಕ್ತತೆಯ ಕುರಿತಂತೆ ಹೆಮ್ಮೆಪಟ್ಟಿದ್ದು ಖುಷಿ ತಂದಿತು. ಕೋರ್ ವಿಷಯಗಳು, ಆಂಗ್ಲ ಭಾಷಾ ಬೋಧನೆ ಪರಿಣಾಮಕಾರಿಯಾಗಿದೆ ಎಂದು ಆ ಮಕ್ಕಳು ಹೇಳಿದರು. ಕೊರೊನಾ ಸಮಯದಲ್ಲಿ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಈ ರೀತಿ ಕೈ ಜೋಡಿಸಿದಲ್ಲಿ ನಿಜಕ್ಕೂ ಪರಿಣಾಮಕಾರಿ ಯಾಗುತ್ತದೆ. ಪಬ್ಲಿಕ್ ಟೀವಿ ಅಭಿಯಾನಕ್ಕೆ ಅಭಿನಂದನೆಗಳು.

ಈ ಮಕ್ಕಳು ಚಂದನ ಟಿವಿಯಲ್ಲಿ ಬರುತ್ತಿರುವ ಪಾಠಗಳನ್ನು ಸಹ ವೀಕ್ಷಿಸುತ್ತಿದ್ದಾರೆ. ಅದರಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ ಚಟುವಟಿಕೆಗಳಿಂದ ದೂರವಿರುವುದು ಸಂತಸ ತಂದಿಲ್ಲವೆನ್ನುವುದು ಅವರೊಂದಿಗೆ ನಾನು ಚರ್ಚಿಸಿದಾಗ ಖಚಿತವಾದ ಅಂಶ. ಸಂಶಯ ಪರಿಹಾರಕ್ಕೆ ಶಿಕ್ಷಕರಿಲ್ಲ, ಸ್ಪರ್ಧಾತ್ಕಕವಾದ ಮನೋಭಾವಕ್ಕೆ ಕುಂದುಂಟಾಗಿದೆ, ಆಟಪಾಠಗಳೆಂಬ ದೈಹಿಕ ಚಟುವಟಿಕೆಗಳಿಲ್ಲ, ಮಧ್ಯಾಹ್ನದ ಬಿಸಿಯೂಟ ದೊರೆಯುತ್ತಿಲ್ಲ ಎಂಬ ಸಮಸ್ಯೆಗಳು ಕೇಳಿಬಂದವು.

ತಾಲೂಕಿನ ಶಿಕ್ಷಕರು ವಿದ್ಯಾಗಮ ಕಾರ್ಯಕ್ರಮವು ಸ್ಥಗಿತಗೊಂಡಿರುವ ಕಾರಣ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಕೊರತೆ, ಪೋಷಕರಲ್ಲಿ ಅವರ ಕಲಿಕೆಯನ್ನು ಮುಂದುವರೆಸಲು ನಿರಾಸಕ್ತಿ, ಹೆಚ್ಚುತ್ತಿರುವ ಸಾಮಾಜಿಕ ಸಮಸ್ಯೆಗಳು ಎಲ್ಲವನ್ನೂ ಶಿಕ್ಷಕರು ಗಮನಕ್ಕೆ ತಂದರು. ನಾನು ಇಂದು ಹೋಗಿದ್ದ ಆ ಸರಕಾರಿ ಶಾಲೆಯ ಕಟ್ಟಡವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಸಂಸ್ಥೆ ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟಿದೆ. ಸಿಎಸ್‍ಆರ್ ಅನುದಾನದಡಿ ಈ ಉತ್ತಮ ಕಾರ್ಯ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *