ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸರ್ವ ಸಿದ್ಧತೆ: ಸಚಿವ ಸುರೇಶ್ ಕುಮಾರ್

Public TV
2 Min Read

ಶಿವಮೊಗ್ಗ: ಇದೇ ಜೂನ್ 25 ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎದುರಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ನಿರಾತಂಕವಾಗಿ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಿವಮೊಗ್ಗ, ಚಿಕಮಗಳೂರು ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಮಕ್ಕಳ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ರಾಜ್ಯದ ಉಚ್ಛ ನ್ಯಾಯಾಲಯಕ್ಕೆ ಈ ಕುರಿತು ಸರ್ಕಾರ ಹೇಳಿಕೆಯನ್ನು ಸಲ್ಲಿಸಿದ್ದು, ಅದರ ಪ್ರಕಾರ ಪರೀಕ್ಷೆಯನ್ನು ಆಯೋಜಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಹಾಲ್‍ನಲ್ಲಿ 18ಕ್ಕಿಂತ ಹೆಚ್ಚು ಮಕ್ಕಳು ಇರಬಾರದು. ಮಾರ್ಗಸೂಚಿ ಪ್ರಕಾರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿ ಮಕ್ಕಳು ಹಾಲ್ ಟಿಕೆಟ್ ಪಡೆಯಲು ಬರುವ ಸಂದರ್ಭದಲ್ಲಿಯೇ ಮಾಸ್ಕ್ ಒದಗಿಸಬೇಕು. ಪರೀಕ್ಷೆ ಮುಗಿದ ಬಳಿಕ ಮಕ್ಕಳು ಗುಂಪಾಗಿ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರತಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಪ್ರತಿ ದಿನ ಮಾಡಲಾಗುವುದು. ಅನಾರೋಗ್ಯ ಲಕ್ಷಣ ಇರುವ ಮಕ್ಕಳನ್ನು ಮೊದಲೇ ನಿಗದಿಪಡಿಸಿದ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಎಲ್ಲಾ ಶಾಲೆಗಳಿಗೆ ಈಗಾಗಲೇ ಸ್ಯಾನಿಟೈಸರ್ ಒದಗಿಸಲಾಗಿದೆ ಎಂದರು.

ಪರೀಕ್ಷೆ ಆರಂಭವಾಗುವ ಎರಡು ದಿನಗಳ ಮೊದಲು ಇಡೀ ಪರೀಕ್ಷಾ ಕೇಂದ್ರದ ಸ್ಯಾನಿಟೈಜೇಶನ್ ಮಾಡಬೇಕು. ಪರೀಕ್ಷೆ ಮುಗಿದ ಬಳಿಕ ಪ್ರತಿದಿನ ಇದನ್ನು ಪುನರಾವರ್ತಿಸಬೇಕು. ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸಹ ಎಲ್ಲಾ ಮುನ್ನೆಚ್ಚರಿಕೆ ವಹಿಸಬೇಕು. ಅವರು ಹೆಚ್ಚುವರಿಯಾಗಿ ಕೈಗವಸು ಧರಿಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಬರುವಂತೆ ಸೂಚನೆ ನೀಡಬೇಕು. ಮಧ್ಯಾಹ್ನ ಬಿಸಿಯೂಟ ಒದಗಿಸುವ ಕುರಿತು ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಶಾಲಾ ಕೊಠಡಿಯಲ್ಲಿ ಬಿಸಿಯೂಟ ನೀಡಬಾರದು. ಯಾವುದೇ ಕಾರಣಕ್ಕೂ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದರು.

ಚಂದನ ವಾಹಿನಿ ಮೂಲಕ ಈಗಾಗಲೇ ವಿದ್ಯಾರ್ಥಿಗಳಿಗೆ ಪುನರ್ ಮನನ ತರಗತಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಜೂನ್ 12ರಿಂದ 17ರವರೆಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಹಳೆ ಪ್ರಶ್ನೆ ಪತ್ರಿಕೆ ಆಧಾರಿತ ಪುನರ್ ಮನನ ತರಗತಿಗಳು ನಡೆಯಲಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಶೈಕ್ಷಣಿಕ ವ್ಯವಸ್ಥೆ ಬದಲಾಗಿದ್ದು, ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಟಿವಿ ಮಾಧ್ಯಮದ ಮೂಲಕ ಕಲಿಕೆ ಕ್ರಮ ಆರಂಭಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಹೇಳಿದರು.

ಈಗ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ತರಗತಿಗಳನ್ನು ಆರಂಭಿಸಿವೆ. ಈ ಕುರಿತು ಸ್ಪಷ್ಟ ಮಾರ್ಗಸೂಚಿ ಸಿದ್ಧಪಡಿಸುವ ಉದ್ದೇಶದಿಂದ ನಿಮ್ಹಾನ್ಸ್ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ನಾಳೆ ಅಂತಿಮ ಹಂತದ ಸಮಾಲೋಚನೆ ನಡೆಯಲಿದ್ದು, ಆ ಬಳಿಕ ಸ್ಪಷ್ಟ ನಿರ್ಧಾರ ಪ್ರಕಟಿಸಲಾಗುವುದು. ಎಲ್‍ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಆನ್‍ಲೈನ್ ತರಗತಿ ನಡೆಸುವುದು ಅವೈಜ್ಞಾನಿಕ ಮಾತ್ರವಲ್ಲ ಅಮಾನವೀಯವಾಗಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಕಂಟೈನ್‍ಮೆಂಟ್ ವಲಯದಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಒಂದು ವೇಳೆ ಪರೀಕ್ಷೆ ಆರಂಭವಾದ ಬಳಿಕ ಕಂಟೈನ್‍ಮೆಂಟ್ ವಲಯ ಘೋಷಣೆಯಾದರೆ, ಅಂತಹ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ನಡೆಯುವ ಪೂರಕ ಪರೀಕ್ಷೆ ಸಂದರ್ಭದಲ್ಲಿ ಅವಕಾಶ ನೀಡಲಾಗುವುದು. ಅವರನ್ನು ಹೊಸ ವಿದ್ಯಾರ್ಥಿಗಳೆಂದೇ ಪರಿಗಣಿಸಲಾಗುವುದು ಎಂದರು.

ಮೂರು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮ್ಮ ಜಿಲ್ಲೆಗಳಲ್ಲಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಶಾಸಕ ಅರಗ ಜ್ಞಾನೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒ ಎಂ.ಎಲ್.ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *