ವಿಡಿಯೋ: ನಡುರಸ್ತೆಯಲ್ಲೇ ಮಹಿಳೆಯನ್ನು ಏಕವಚನದಲ್ಲಿ ನಿಂದಿಸಿದ ಕುಮಾರ್ ಬಂಗಾರಪ್ಪ

Public TV
1 Min Read

– ಶಾಸಕರ ವರ್ತನೆಗೆ ನೆಟ್ಟಿಗರು ಫುಲ್ ಗರಂ

ಶಿವಮೊಗ್ಗ: ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ನಡು ರಸ್ತೆಯಲ್ಲೇ ಮಹಿಳೆಯನ್ನು ಏಕ ವಚನದಲ್ಲಿ ನಿಂದಿಸಿ ಅವಾಜ್ ಹಾಕಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೊರಬ ಸಾಗರ ರಸ್ತೆಯಲ್ಲಿರುವ ಸಿಮೆಂಟ್ ಅಂಗಡಿಯೊಂದರ ಮುಂದೆ ರಸ್ತೆಗೆ ವಾಹನವನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು. ಇದೇ ರಸ್ತೆಯಲ್ಲಿ ಶಾಸಕರು ಸಾಗುವಾಗ ರಸ್ತೆಗೆ ವಾಹನ ಅಡ್ಡಲಾಗಿ ನಿಲ್ಲಿಸಿದ್ದಕ್ಕೆ ತಮ್ಮ ಕಾರಿನಿಂದ ಇಳಿದು, ಮೊದಲು ವಾಹನದ ಚಾಲಕನಿಗೆ ಅವಾಜ್ ಹಾಕಿ ಆತನ ಡಿಎಲ್ ಕಸಿದುಕೊಂಡಿದ್ದಾರೆ. ನಂತರ ಅಂಗಡಿಯ ಮಹಿಳೆಗೆ ನೂರಾರು ಜನರ ಎದುರು ರಸ್ತೆಯಲ್ಲಿಯೇ ಏಕ ವಚನದಲ್ಲಿ ನಿಂದಿಸಿದ್ದಾರೆ.

ಶಾಸಕರು ಅವಾಜ್ ಹಾಕಿದ್ದಕ್ಕೆ ಸುಮ್ಮನಾಗದ ಮಹಿಳೆ, ಇದು ನನ್ನ ಕೆಲಸವಲ್ಲ, ವಾಹನದ ಚಾಲಕನ ಕೆಲಸ ಎಂದು ಸಮಜಾಯಿಷಿ ನೀಡಿದ್ದಾರೆ. ಸಮಜಾಯಿಷಿ ನೀಡಿರುವುದಕ್ಕೆ ವಾಹನ ಚಾಲಕ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದರೆ ಮಾಲೀಕರು ತಿಳಿಹೇಳಬೇಕಲ್ಲವೇ ಎಂದು ಶಾಸಕ ಕುಮಾರ್ ಬಂಗಾರಪ್ಪ ಗದರಿಸಿದ್ದಾರೆ. ನಂತರ ಮಹಿಳೆ ಅಂಗಡಿಯೊಳಗೆ ಹೋಗಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಶಾಸಕರು ಪುರಸಭೆ ಮುಖ್ಯಾಧಿಕಾರಿಗೆ ಸ್ಥಳಕ್ಕೆ ಬರಲು ಹೇಳಿ ಅಂಗಡಿಯ ಲೈಸೆನ್ಸ್ ರದ್ದು ಮಾಡಲು ಸೂಚಿಸುವೆ ಎಂದು ದರ್ಪ ತೋರಿದ್ದಾರೆ. ಅಷ್ಟು ಹೊತ್ತಿಗೆ ಅವರ ಹಿಂದೆ ವಾಹನಗಳು ಟ್ರಾಫಿಕ್ ಜಾಮ್ ನಿಂದ ಸಾಲುಗಟ್ಟಿ ನಿಂತಿವೆ. ಈ ವಿಡಿಯೋವನ್ನು ಶಾಸಕರೇ ತಮ್ಮ ಕುಮಾರ್ ಬಂಗಾರಪ್ಪ ಫೇಸ್‍ಬುಕ್ ನಲ್ಲಿ ವೈರಲ್ ಮಾಡಿದ್ದಾರೆ.

ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ಇಷ್ಟೊಂದು ಅವಾಂತರ ಆಗುತ್ತಿರಲಿಲ್ಲ. ಅದು ಮಹಿಳೆಯೊಬ್ಬರಿಗೆ ಸಾರ್ವಜನಿಕವಾಗಿ ಬೈದಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ, ಬಡಚಾಲಕನ ಮೇಲೆ ಹೌಹಾರಿದ್ದೀರಿ ಆದರೆ ನಿಮ್ಮಿಂದಲೇ ರಸ್ತೆ ಜಾಮ್ ಆಗಿದೆ, ಇದಕ್ಕೆ ಯಾರು ಹೊಣೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *