ಕೊಪ್ಪಳ: ವಿಜಯನಗರ ಕಾಲುವೆ ಒಡೆದು ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿರುವ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ ವಿಜಯನಗರ ಕಾಲುವೆ ಒಡೆದಿದೆ. ಕಳೆದ ದಿನ ಸುರಿದ ಮಳೆಯಿಂದ ಹೆಚ್ಚಿನ ನೀರು ಕಾಲುವೆಗೆ ಹರಿದು ಬಂದ ಪರಿಣಾಮ ಕಾಲುವೆ ಒಡೆದು ಅಕ್ಕ ಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಪರಿಣಾಮ ನಾಟಿ ಮಾಡಿದ್ದ ಭತ್ತದ ಬೆಳೆ ನೀರಿಗಾಹುತಿಯಾಗಿದೆ.
ಇತ್ತೀಚೆಗಷ್ಟೆ ಕಡೇಬಾಗಿಲು ಗ್ರಾಮದ ಬಳಿ ಈ ಕಾಲುವೆಯನ್ನು ದುರಸ್ತಿ ಮಾಡಲಾಗಿತ್ತು. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿ ಮಾಡಿದ್ದರ ಪರಿಣಾಮ ಕಾಲುವೆ ಒಡೆದು ಹೋಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ವಿಜಯನಗರದ ಕಾಲುವೆ ದುರಸ್ಥಿ ಕಾರ್ಯ ಇನ್ನೂ ನಡೆಯುತ್ತಿದೆ. ಕಾಲುವೆ ಒಡೆಯಲು ನೀರಾವರಿ ಅಧಿಕಾರಿಗಳೇ ಕಾರಣ, ಕಳಪೆ ಕಾಮಗಾರಿ ಮಾಡಿಸಿದ್ದರ ಪರಿಣಾಮ ಕಾಲುವೆ ಒಡೆದು ಹೋಗಿದೆ. ಹೀಗಾಗಿ ಇಂತಹ ಘಟನೆಗಳು ಮತ್ತೆ ಜರುಗದಂತೆ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ರೈತರು ಒತ್ತಾಯ ಮಾಡಿದರು.
ಕಾಲುವೆ ದುರಸ್ತಿ
ವಿಜಯನಗರ ಐತಿಹಾಸಿಕ ಕಾಲುವೆಗಳ ಆಧುನೀಕರಣಕ್ಕೆ 370 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ವಿಜಯನಗರ ಕಾಲುವೆಗಳು ಸುಮಾರು 500ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ತುಂಗಭದ್ರ ನದಿಗೆ ಅಡ್ಡಲಾಗಿ ಆಯಾ ಸ್ಥಳಗಳಲ್ಲಿ 11 ಅಣೆಕಟ್ಟುಗಳನ್ನು ಹಾಗೂ 16 ಕಾಲುವೆಗಳ ಜಾಲ ನಿರ್ಮಿಸಲಾಗಿದೆ.
ಒಟ್ಟು ಕಾಲುವೆಗಳ ಉದ್ದ 215 ಕಿ.ಮೀ.ಗಳಿದ್ದು, ಅಣೆಕಟ್ಟು ಪ್ರದೇಶವು 11,154 ಹೆಕ್ಟರ್ (27,561 ಎಕರೆ) ಇರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಹುಲಿಗಿ, ಶಿವಪುರ, ಆನೆಗುಂದಿ, ಗಂಗಾವತಿಯ ಅಪ್ಪರ್ ಮತ್ತು ಲೋವರ್ ಎಡದಂಡೆ ಕಾಲುವೆಗಳು. ಅಣೆಕಟ್ಟಿನ ಪ್ರದೇಶವು ಒಟ್ಟು 2,899 ಹೆಕ್ಟರ್ ಅಂದರೆ 7,163 ಎಕರೆಯಷ್ಟು ಪ್ರದೇಶವನ್ನಾಗಿ ಗುರುತಿಸಲಾಗಿದೆ.