ವಿಚಾರಣೆಗೆ ಬಂದವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ರು

Public TV
2 Min Read

– ದೂರಿನ ಹಿನ್ನೆಲೆ ತನಿಖೆಗೆ ಬಂದಿದ್ದ ಅಧಿಕಾರಿಗಳು
– ವೈದ್ಯಾಧಿಕಾರಿ ಪರ ನಿಂತ ಸ್ಥಳೀಯರು

ಕಾರವಾರ: ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ವೈದ್ಯಾಧಿಕಾರಿಯ ವಿಚಾರಣೆ ನೆಡೆಸಲು ಬಂದ ಅಧಿಕಾರಿಗಳು ವೈದ್ಯರ ಉತ್ತಮ ಕಾರ್ಯ ಹಾಗೂ ಸಾರ್ವಜನಿಕರ ಅಕ್ರೋಶಕ್ಕೆ ಮಣಿದು ತಾಲೂಕು ವೈದ್ಯಾಧಿಕಾರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ ಅಪರೂಪದ ಘಟನೆ ಬುಧವಾರ ಭಟ್ಕಳದಲ್ಲಿ ಸಾಕ್ಷಿಯಾಯಿತು.

ಭಟ್ಕಳ ತಾಲೂಕು ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ರವರ ವಿರುದ್ಧ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಭಟ್ಕಳದ ಈಶ್ವರ್ ನಾಯ್ಕ್ ಎಂಬವರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತ್ರತ್ವದ ತಂಡ ಭಟ್ಕಳದ ತಾಲೂಕು ಆಸ್ಪತ್ರೆಗೆ ಆಗಮಿಸಿ ತನಿಖೆ ನೆಡೆಸುತಿತ್ತು.

ಈ ವಿಷಯ ಸುತ್ತಮುತ್ತಲ ಜನರಿಗೆ ತಿಳಿದು ಆಸ್ಪತ್ರೆಯಲ್ಲಿ ನೂರಾರು ಜನರು ಗುಂಪುಗೂಡಿದರು. ಹಾಳು ಬಿದ್ದಿದ್ದ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ವೈದ್ಯರಿಗೆ ಹಳೆಯ ದ್ವೇಷ ಇಟ್ಟುಕೊಂಡು ದೂರು ನೀಡಿದ ವ್ಯಕ್ತಿಯ ಮಾತು ಕೇಳಿ ಬಂದಿರುವುದಕ್ಕೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು ನಂತರ ವೈದ್ಯಾಧಿಕಾರಿಯ ಪ್ರಾಮಾಣಿಕ ಕಾರ್ಯವೈಖರಿ ನೋಡಿ ಸಂತಸ ಪಟ್ಟ ತನಿಖಾಧಿಕಾರಿಗಳ ತಂಡ ಅವರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು.

ನಾಯಿಗಳ ವಾಸಸ್ಥಾನವಾಗಿದ್ದ ತಾಲೂಕು ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆ ಮಾಡಿದ್ದ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್. ಭಟ್ಕಳ ತಾಲೂಕು ಆಸ್ಪತ್ರೆಗೆ ವರ್ಗವಾಗಿ ಬಂದಾಗ ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲದೇ ಹಾಳು ಬಿದ್ದಿದ್ದ ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಿದ್ದರು.

ರಾತ್ರಿ ಹಗಲು ಎನ್ನದೇ ಕರ್ತವ್ಯ ಮುಗಿದರೂ ರೋಗಿಗಳೊಂದಿಗೆ ಇದ್ದು ಅವರ ಯೋಗಕ್ಷೇಮ ನೋಡಿಕೊಳ್ಳುತಿದ್ದಾರೆ. ಇವರು ಹಲವು ದಾನಿಗಳ ಸಹಕಾರದೊಂದಿಗೆ 50 ಲಕ್ಷದ ಡೆಯಾಬಿಟಿಸ್ ಸೆಂಟರ್ ಸಹ ತೆರೆದು ಉಚಿತ ವಾಗಿ ಎಲ್ಲವೂ ಸಿಗುವಂತೆ ಮಾಡಿದ್ದರು.

ಕೋವಿಡ್ ಸಂದರ್ಭದಲ್ಲಿ ಹೆದರದೇ ಕಾರ್ಯನಿರ್ವಹಿಸಿ ತಮಗೂ ಕೂಡ ಸೋಂಕು ಬಂದರೂ ಕಾರ್ಯವನ್ನು ಮರೆತಿರಲಿಲ್ಲ. ಹೀಗಾಗಿ ಜನರ ಪ್ರೀತಿ ಗಳಿಸಿದ್ದ ವೈದ್ಯೆ ಎಲ್ಲರ ಅಚ್ಚುಮೆಚ್ವಿನ ತಾಯಿಯಾಗಿದ್ದರು. ಹೀಗಿರುವಾಗ ಇವರ ಬಳಿಯೇ ಕೆಲಸ ಮಾಡುತಿದ್ದ ಈಶ್ವರ್ ನಾಯ್ಕ ಎಂಬಾತ ಬೇಡದೇ ಇರುವ ಕೆಲಸ ಮಾಡಿದ್ದಕ್ಕೆ ಹೊರಹಾಕಿದ್ದರಿಂದ ಸೇಡು ತೀರಿಸಿಕೊಳ್ಳಲು ತನ್ನ ಪ್ರಭಾವ ಬಳಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದನು.

ಇನ್ನು ಆಸ್ಪತ್ರೆಯಲ್ಲಿ ನೂರಾರು ಜನ ಸೇರಿ ವೈದ್ಯರ ತನಿಖೆಗೆ ವಿರೋಧ ವ್ಯಕ್ತಪಡಿಸಿದರು. ಇನ್ನು ಒಂದುವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದರು. ಇದಲ್ಲದೇ ಪರಿಸ್ಥಿತಿ ಉಗ್ರವಾಗುತಿತ್ತು. ನಂತರ ಆಧಿಕಾರಿಗಳು ಇವರು ಮಾಡಿದ ಕೆಲಸಗಳನ್ನು ಪರಿಶೀಲಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಮರಳಿದರು.

Share This Article
Leave a Comment

Leave a Reply

Your email address will not be published. Required fields are marked *