ವಿಎಚ್‍ಪಿಯಿಂದ ಕೊರೊನಾದಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ

Public TV
1 Min Read

ಮಡಿಕೇರಿ: ರಾಜ್ಯಾದ್ಯಂತ ಕೊರೊನಾ ತಾಂಡವಾಡುತ್ತಿದ್ದು, ನಿತ್ಯ ಸಾವಿರಾರು ಪ್ರಕರಣಗಳು ಪತ್ತೆಯಾಗುತ್ತಿವೆ, ಸಾರ್ವಜನಿಕರು ಕಂಗಾಲಾಗಿದ್ದಾರೆ. ಒಂದೆಡೆ ಟೆಸ್ಟಿಂಗ್, ಟ್ರೀಟ್‍ಮೆಂಟ್‍ಗೆ ಸಾಲು ನಿಂತರೆ ಮತ್ತೊಂದೆಡೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸದಸ್ಯರು ಮಾನವೀಯತೆ ಮೆರೆದಿದ್ದು, ಉಚಿತವಾಗಿ ಶವಸಂಸ್ಕಾರ ಮಾಡುತ್ತಿದ್ದಾರೆ.

ಕೊಡಗಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಯನ್ನು ಉಚಿತವಾಗಿ ನೆರವೇರಿಸುತ್ತಿವೆ. ಮಡಿಕೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳಗಳ ನೇತೃತ್ವದಲ್ಲಿ 50 ಜನರ ತಂಡ ಕಳೆದ ಒಂದು ವರ್ಷದಿಂದ ಕೊವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ನೆರವೇರಿಸುತ್ತಿವೆ.

ಕೆಲವು ಜಿಲ್ಲೆಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಾವಿರಾರು ರೂಪಾಯಿ ಹಣಪಡೆದ ಸಾಕಷ್ಟು ಉದಾಹರಣೆಗಳಿವೆ. ಆದರೆ ಐವತ್ತು ಜನರ ಸ್ವಯಂ ಸೇವಕರ ಈ ತಂಡ ಯಾರಿಂದಲೂ ಹಣ ಪಡೆಯದೆ, ತಮ್ಮ ಖರ್ಚಿನಿಂದಲೇ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಬೇಕಾಗಿರುವ ವೆಚ್ಚ ಭರಿಸುತಿದ್ದಾರೆ.

2020ರ ಆರಂಭದಲ್ಲಿ ಕೊರೊನಾದಿಂದ ಮೃತಪಟ್ಟವರನ್ನು ಹೀನಾಯವಾಗಿ ಸಂಸ್ಕಾರ ಮಾಡುತ್ತಿದ್ದನ್ನು ನೋಡಿದ್ದೆವು. ಯಾವುದೇ ವ್ಯಕ್ತಿ ಸತ್ತಾಗ ಅವರ ಸಂಸ್ಕಾರವನ್ನಾದರೂ ಗೌರವಯುತವಾಗಿ ನಡೆಸಬೇಕೆಂದು ನಿರ್ಧರಿಸಿದೆವು. ಬಳಿಕ 50 ಜನರ ನಮ್ಮ ತಂಡ ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದು ಸಿದ್ಧಗೊಂಡೆವು. ಅಂದಿನಿಂದ ಇಂದಿನವರೆಗೆ ಕೋವಿಡ್ ನಿಂದ ಮೃತಪಟ್ಟ 56 ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಸ್ವಯಂ ಸೇವಕ ವಿನಯ್ ಮಾಹಿತಿ ನೀಡಿದರು.

ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಅಗತ್ಯವಿರುವ ಪಿಪಿಇ ಕಿಟ್ ಅನ್ನು ಆರೋಗ್ಯ ಇಲಾಖೆಯಿಂದ ಪಡೆದುಕೊಳ್ಳುತ್ತೇವೆ. ಮೃತದೇಹ ಸುಡಲು ಬೇಕಾದ ಸೌದೆಗಳನ್ನು ನಮ್ಮ ಮತ್ತು ನಮ್ಮ ಸ್ನೇಹಿತರ ತೋಟಗಳಿಂದ ತರುತ್ತಿದ್ದೇವೆ. ಅವುಗಳನ್ನು ಸ್ಮಶಾನದಲ್ಲಿ ಸೀಳಿ ನಮ್ಮ ಸ್ವಯಂಸೇವಕರೇ ಕಟ್ಟಿಗೆಯಾಗಿ ಮಾಡುತ್ತಾರೆ ಎಂದು ವಿಎಚ್‍ಪಿ ಮಡಿಕೇರಿ ತಾಲೂಕು ಮುಖಂಡ ಸುರೇಶ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *