‘ವಿಂಡೋ ಸೀಟ್’ನಲ್ಲಿ ಕಂಡಿದ್ದು ರೊಮ್ಯಾಂಟಿಕ್ ಫಸ್ಟ್ ಲುಕ್!

Public TV
1 Min Read

– ಜಡಗಟ್ಟಿದ ಮನಸುಗಳಿಗೆ ತಂಗಾಳಿ ತೀಡಿದ ವಿಂಡೋ ಸೀಟ್!

ಕೊರೊನಾ ಕಾಲದ ತುಂಬೆಲ್ಲ ಸಾಕಷ್ಟು ಸಂಚಲನ ಸೃಷ್ಟಿಸುತ್ತಾ ಸಾಗಿ ಬಂದಿದ್ದ ಚಿತ್ರ ವಿಂಡೋ ಸೀಟ್. ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ಅನ್ನೋದರಿಂದ ಮೊದಲ್ಗೊಂಡು, ರಂಗಿತರಂಗ ಖ್ಯಾತಿಯ ನಿರೂಪ್ ನಾಯಕನಾಗಿರೋ ಚಿತ್ರ ಎಂಬಲ್ಲಿಯವರೆಗೆ ವಿಂಡೋ ಸೀಟ್‍ನತ್ತ ಪ್ರೇಕ್ಷಕರ ಚಿತ್ತ ನೆಟ್ಟುಕೊಳ್ಳಲು ನಾನಾ ಕಾರಣಗಳಿದ್ದವು. ತೀರಾ ಇತ್ತೀಚೆಗೆ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿತ್ತು. ಅದರ ಫಲವಾಗಿಯೇ ಫಸ್ಟ್ ಲುಕ್ ಹೇಗಿರಬಹುದೆಂಬ ಕುತೂಹಲ ಪಡಿಮೂಡಿಕೊಂಡಿತ್ತಲ್ಲಾ? ಅದಕ್ಕೀಗ ಉತ್ತರ ಸಿಕ್ಕಿದೆ. ಇದುವರೆಗೂ ಆವರಿಸಿಕೊಂಡಿದ್ದ ಕಾತರಗಳನ್ನೆಲ್ಲ ತಣಿಸುವಂಥ ರೊಮ್ಯಾಂಟಿಕ್ ಫಸ್ಟ್ ಲುಕ್ ಇದೀಗ ಲಾಂಚ್ ಆಗಿದೆ.

ಶೀತಲ್ ಶೆಟ್ಟಿ ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಸಿನಿಮಾ ಎಂಬುದನ್ನು ಒತ್ತಿ ಹೇಳುತ್ತಾ ಬಂದಿದ್ದರು. ಅದನ್ನು ನಿಜವಾಗಿಸುವಂತೆಯೇ ಈ ಫಸ್ಟ್ ಲುಕ್ ಮೂಡಿ ಬಂದಿದೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಇಲ್ಲಿ ಪಕ್ಕಾ ರೊಮ್ಯಾಂಟಿಕ್ ಲುಕ್ಕಿನಲ್ಲಿ ಕಂಗೊಳಿಸಿದ್ದಾರೆ. ಈ ಮೂಲಕವೇ ವಿಂಡೋ ಸೀಟ್‍ನಲ್ಲೊಂದು ಮಧುರವಾದ ಪ್ರೇಮಕಾವ್ಯವಿದೆ ಎಂಬುದರ ಸ್ಪಷ್ಟ ಸುಳಿವೂ ಸಿಕ್ಕಂತಾಗಿದೆ. ಇದರ ಆಚೀಚೆಗೆ ಅದೆಂತೆಂಥಾ ಬೆರಗುಗಳಿವೆಯೋ ಗೊತ್ತಿಲ್ಲ. ಆದರೆ, ಈ ಪುಟ್ಟದಾದ ಫಸ್ಟ್ ಲುಕ್ ಅನ್ನು ಶೀತಲ್ ಶೆಟ್ಟಿ ಅಚ್ಚುಕಟ್ಟಾಗಿಯೇ ರೂಪಿಸಿದ್ದಾರೆ. ಈ ಕಾರಣದಿಂದಲೇ ಸದರಿ ಫಸ್ಟ್ ಲುಕ್ಕಿಗೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಮೆಚ್ಚುಗೆಗಳು ಕೇಳಿ ಬರಲಾರಂಭಿಸಿವೆ.

ಈ ಫಸ್ಟ್ ಲುಕ್ ಮೂಲಕವೇ ಒಟ್ಟಾರೆ ಚಿತ್ರ ಮೂಡಿ ಬಂದಿರಬಹುದಾದ ರೀತಿಯ ಝಲಕುಗಳು ಸಿಕ್ಕಿವೆ. ನಿರ್ಮಾಪಕ ಜಾಕ್ ಮಂಜು ಕೂಡಾ ರಿಚ್ ಆಗಿಯೇ ರೂಪಿಸಿದ್ದಾರೆಂಬ ಅಂಶವಂತೂ ಢಾಳಾಗಿಯೇ ಗೋಚರಿಸುವಂತಿದೆ.

ಇದೆಲ್ಲದಕ್ಕೂ ಮುಖ್ಯವಾಗಿ ಅರ್ಜುನ್ ಜನ್ಯಾ ವಿಂಡೋ ಸೀಟ್ ಅನ್ನು ಮ್ಯೂಸಿಕಲ್ ಹಿಟ್ ಆಗಿಸುವಂತೆ ಮೋಡಿ ಮಾಡಿರೋ ಲಕ್ಷಣ ಈ ಫಸ್ಟ್ ಲುಕ್‍ನ ಹೈಲೈಟ್‍ಗಳಲ್ಲೊಂದಾಗಿ ಗುರುತಿಸಿಕೊಳ್ಳುತ್ತೆ. ಇನ್ನುಳಿದಂತೆ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ಅತ್ಯಂತ ಪರಿಣಾಮಕಾರಿಯಾಗಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ಇದುವರೆಗೂ ಅವರ ನಿರ್ದೇಶನದ ಮೇಲೆ ಯಾವ ಥರದ ಕುತೂಹಲಗಳಿದ್ದವೋ ಅವೆಲ್ಲವೂ ಈ ಫಸ್ಟ್ ಲುಕ್‍ನಿಂದ ನೋರ್ಮಡಿಸಿರೋದಂತೂ ನಿಜ.

Share This Article
Leave a Comment

Leave a Reply

Your email address will not be published. Required fields are marked *