– ಇನ್ನಾದ್ರೂ ಎಚ್ಚೆತ್ತುಕೊಳ್ಳಿ ಯುವಕರೇ ಅಂದ್ರು ಡೊಂಬಯ್ಯ ದೇವಾಡಿಗ
ಮಂಗಳೂರು: ಕೊರೊನಾದ ಚೈನ್ ಲಿಂಕ್ ಕಟ್ ಮಾಡಲು ರಾಜ್ಯ ಸರ್ಕಾರ ಲಾಕ್‍ಡೌನ್ ವಿಸ್ತರಿಸಿದ್ದು, ಪೊಲೀಸರೂ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ನಡುವೆ ಕೊರೊನಾದಿಂದಾಗಿ ತನ್ನ ಮನೆಯ ಸದಸ್ಯನನ್ನು ಕಳೆದುಕೊಂಡ ದುಖಃದಲ್ಲಿದ್ದ ಮಂಗಳೂರಿನ ಎ.ಎಸ್.ಐ ಡೊಂಬಯ್ಯ ದೇವಾಡಿಗ ಕರ್ತವ್ಯದ ವೇಳೆಯೇ ಕಣ್ಣೀರು ಹಾಕಿಕೊಂಡು ಯುವಕರೇ ಸುಖಾಸುಮ್ಮನೆ ರಸ್ತೆಗೆ ಬರಬೇಡಿ ಎಂದ ಮನವಿಮಾಡಿಕೊಂಡಿದ್ದಾರೆ.
ತನ್ನ ಅಣ್ಣನ ಮಗ 33 ವರ್ಷದ ಯುವಕ ಕೊರೊನಾವನ್ನು ನಿರ್ಲಕ್ಷ್ಯ ಮಾಡಿ ಎರಡು ದಿನದ ಹಿಂದೆ ಸಾವನ್ನಪ್ಪಿದ್ದಾನೆ. ಮದುವೆಯಾಗಿ ಎರಡು ತಿಂಗಳಾದ ಯುವಕ ಕೊರೊನಾ ಪಾಸಿಟಿವ್ ಆಗಿ ಒಂದೇ ವಾರದಲ್ಲಿ ಸಾವನ್ನಪ್ಪಿದ್ದಾನೆ. ಕೊರೊನಾ ನಮಗೆ ಬರಲ್ಲ ಎಂದು ಬೇಕಾಬಿಟ್ಟಿ ಓಡಾಡೋ ಯುವಕರನ್ನು ಚೆಕ್ ಪೋಸ್ಟ್ ನಲ್ಲಿ ತಡೆದು ತನ್ನ ಕಣ್ಣೀರ ಕಥೆಯನ್ನೇ ಎ.ಎಸ್.ಐ ಹೇಳುತ್ತಿದ್ದಾರೆ.
ಮಂಗಳೂರಿನ ಕದ್ರಿ ಟ್ರಾಫಿಕ್ ಠಾಣೆಯ ಎ.ಎಸ್.ಐ ಡೊಂಬಯ್ಯ ದೇವಾಡಿಗರ ಅಣ್ಣನಮಗ ಎರಡು ತಿಂಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಇತ್ತೀಚೆಗೆ ಮಂಗಳೂರಿಗೆ ಬಂದಿದ್ದು ಕೆಲ ದಿನದಲ್ಲೇ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಆದರೂ ನಿರ್ಲಕ್ಷ್ಯ ಮಾಡಿದ್ದು ಬಳಿಕ ಉಸಿರಾಟದ ಸಮಸ್ಯೆಯಾದಾಗ ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಎರಡು ದಿನದ ಹಿಂದೆ ಸಾವನ್ನಪ್ಪಿದ್ದಾರೆ. ಈ ಸಾವಿನಿಂದ ಕಂಗೆಟ್ಟರೂ ಕರ್ತವ್ಯಕ್ಕೆ ಹಾಜರಾದ 59 ವರ್ಷದ ದೇವಾಡಿಗರು ಅನಗತ್ಯವಾಗಿ ತಿರುಗಾಡುವ ಯುವ ವಾಹನ ಸವಾರರಲ್ಲಿ ಮನೆಯಲ್ಲಿರುವಂತೆ ವಿನಂತಿಸುತ್ತಿದ್ದಾರೆ.
ನಮಗೇನು ಕೊರೊನಾ ಬರೋದಿಲ್ಲ ಎಂದು ಉಡಾಫೆ ಮಾತಾಡೋ ಯುವಕರಿಗೆ ತನ್ನ ಅಣ್ಣನ ಮಗನ ಸ್ಥಿತಿಯನ್ನು ಹೇಳಿ ಕಣ್ಣೀರು ಹಾಕುತ್ತಿದ್ದಾರೆ. ಇನ್ನೇನು 6 ತಿಂಗಳಲ್ಲಿ ನಿವೃತ್ತಿಯಾಗುತ್ತೇನೆಂದು ಗೊತ್ತಿದ್ದರೂ ಕೊರೊನಾ ಸಂಕಷ್ಟ ಕಾಲದಲ್ಲಿ ಕುಂಟು ನೆಪಹೇಳಿ ರಜೆ ಹಾಕಿ ಮನೆಯಲ್ಲಿ ಇರದೆ, ರಾತ್ರಿ ಹಗಲು ರಸ್ತೆಯಲ್ಲಿ ಜನರ ಪ್ರಾಣ ರಕ್ಷಣೆಗಾಗಿ ತಪಾಸಣೆಯಲ್ಲಿ ತೊಡಗಿರುವ ಎಎಸ್‍ಐ ಡೊಂಬಯ್ಯ ದೇವಾಡಿಗ ಇತರರಿಗೆ ಮಾದರಿಯಾಗಿದ್ದಾರೆ.