ವಾಹನಗಳಿಗೆ ಬೆಂಕಿ ಹಚ್ಚುವ ಮೊದಲು ಮಾಲೀಕನ ವಿವರ ಹುಡುಕಾಟ – ದೆಹಲಿ ಗಲಭೆಕೋರರನ್ನು ಪತ್ತೆ ಹಚ್ಚಿದ್ದು ಹೇಗೆ?

Public TV
3 Min Read

– ಸಿಎಎ ವಿರೋಧಿಸಿ ದೆಹಲಿಯಲ್ಲಿ ದಂಗೆ
– ತಂತ್ರಜ್ಞಾನ ಬಳಸಿ ಆರೋಪಿಗಳ ಪತ್ತೆ

ನವದೆಹಲಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿ ವಿರೋಧಿಸಿ ಕಳೆದ ಫೆಬ್ರವರಿಯಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

17,500 ಪುಟಗಳ ಚಾರ್ಜ್‌ಶೀಟ್‌ನಲ್ಲಿಒಟ್ಟು 15 ಮಂದಿ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ), ಐಪಿಸಿ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 53 ಮಂದಿ ಸಾನ್ನಪ್ಪಿದ್ದು ಒಟ್ಟು 751 ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಒಟ್ಟು 2,193 ಮಂದಿಯನ್ನು ಬಂಧನ ಅಥವಾ ವಶಕ್ಕೆ ಪಡೆಯಲಾಗಿತ್ತು.

ಈ ಗಲಭೆಯನ್ನು ಗಂಭೀರವಾಗಿ ಸ್ವೀಕರಿಸಿದ್ದ ದೆಹಲಿ ಪೊಲೀಸರು ವಿವಿಧ ತಂತ್ರಜ್ಞಾನಗಳನ್ನು ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ತಂತ್ರಜ್ಞಾನಗಳ ಸಹಾಯವನ್ನು ಬಳಸಿ ಆರೋಪಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಇಲ್ಲಿ ಯಾವೆಲ್ಲ ತಂತ್ರಜ್ಞಾನವನ್ನು ಬಳಸಲಾಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಯಾವೆಲ್ಲ ತಂತ್ರಜ್ಞಾನ ಬಳಕೆ?
1. ಐಪಿಡಿಆರ್‌ ವಿಶ್ಲೇಷಣೆ:
ಗಲಭೆಯ ವೇಳೆ ಕರೆ ಮತ್ತು ಮೆಸೇಜ್‌ ಮಾಡಿದರೆ ನಾವು ಸಿಕ್ಕಿ ಬೀಳುತ್ತೇವೆ ಎಂಬ ಕಾರಣಕ್ಕೆ ಇಂಟರ್‌ನೆಟ್‌ ಬಳಸಿ ಗಲಭೆಕೋರರು ಸಂವಹನ ಮಾಡಿದ್ದರು. ಆದರೆ ಪೊಲೀಸರು ಇಂಟರ್‌ನೆಟ್‌ ಪ್ರೊಟಕಲ್‌ ಡಿಟೈಲ್ಸ್‌ ರೆಕಾರ್ಡ್‌(ಐಪಿಡಿಆರ್) ಮೂಲಕ ಯಾರೆಲ್ಲ ಈ ವೇಳೆ ಗಲಭೆಯಾದ ಸ್ಥಳದಲ್ಲಿ ಇಂಟರ್‌ನೆಟ್‌ ಮೂಲಕ ಸಂಹನ ಮಾಡಿದ್ದಾರೋ ಅವರನ್ನು ಪತ್ತೆ ಹಚ್ಚಿದ್ದಾರೆ. ಪ್ರತಿಯೊಂದು ಕಂಪ್ಯೂಟರ್‌ಗೆ ಹೇಗೆ ಐಪಿ ಅಡ್ರೆಸ್‌ ಇರುತ್ತದೋ ಅದೇ ರೀತಿ ಫೋನ್‌ಗಳಿಗೂ ಇರುತ್ತದೆ. ಐಪಿಡಿಆರ್‌ ಮೂಲಕ ಮೊಬೈಲ್‌ ಬಳಕೆದಾರರು ಇಂಟರ್‌ನೆಟ್‌ನಲ್ಲಿ ಏನು ಮಾಡಿದ್ದಾರೋ ಅವೆಲ್ಲದರ ಡೇಟಾ ಸಂಗ್ರಹವಾಗುತ್ತದೆ.

2.ಜಿಯೋಲೋಕೇಶನ್‌ ವಿಶ್ಲೇಷಣೆ:
ಗೂಗಲ್‌ ಟೈಮ್‌ಲೈನ್‌ ಅಥವಾ ಗೂಗಲ್‌ ಮ್ಯಾಪ್‌ ಮೂಲಕ ಆರೋಪಿಗಳು ಗಲಭೆ ಪ್ರದೇಶದಲ್ಲಿ ಸಕ್ರಿಯವಾಗಿದ್ದನ್ನು ಪತ್ತೆಹಚ್ಚಲಾಗಿದೆ. ಆರೋಪಿ ಒಂದು ಪ್ರದೇಶದಿಂದ ಯಾವೆಲ್ಲ ಪ್ರದೇಶಕ್ಕೆ ತೆರಳಿದ್ದ ಎಲ್ಲ ಮಾಹಿತಿ ಗೂಗಲ್‌ ಟೈಮ್‌ಲೈನ್‌ನಲ್ಲಿ ಸಂಗ್ರಹವಾಗಿತ್ತು.

3. ಫೇಶಿಯಲ್‌ ರಿಕನ್‌ಸ್ಟ್ರಕ್ಷನ್‌:
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ಎಸಗುವ ದೃಶ್ಯ ಮೊಬೈಲ್‌ ವಿಡಿಯೋದಲ್ಲಿ ಸೆರೆಯಾದರೂ ಆ ವ್ಯಕ್ತಿಗಳೇ ನಿಜವಾದ ಆರೋಪಿಗಳು ಎಂದು ಗುರುತು ಪತ್ತೆಹಚ್ಚುವುದು ಕಷ್ಟ. ಈ ಕಾರಣಕ್ಕೆ ಮುಖಗಳನ್ನು ಸರಿಯಾಗಿ ಗುರುತಿಸುವ ವಿಶೇಷ ಸಾಫ್ಟ್‌ವೇರ್‌ ಬಳಸಿ ಸುಮಾರು 2,655 ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ. ಸಿಸಿ ಟಿವಿ ದೃಶ್ಯದ ಆಧಾರದಲ್ಲೂ ಹಲವರನ್ನು ಬಂಧಿಸಲಾಗಿದೆ.

4. ಫಂಡ್‌ ವಿಶ್ಲೇಷಣೆ:
ದೆಹಲಿ ಗಲಭೆ ಪೂರ್ವನಿಯೋಜಿತವಾಗಿದ್ದು, ಅದಕ್ಕಾಗಿ ಮೊದಲೇ ಹಣಕಾಸಿನ ನೆರವು ಸಿಕ್ಕಿತ್ತು. ಈ ವಿಚಾರವನ್ನು ಇಟ್ಟುಕೊಂಡು ಆರೋಪಿಗಳ ಖಾತೆಗೆ ಹಣ ಎಲ್ಲಿಂದ ಎಷ್ಟು ಪ್ರಮಾಣದಲ್ಲಿ ಜಮೆಯಾಗಿದೆ ಎಂಬುದನ್ನು ತನಿಖೆ ಮಾಡಲಾಗಿದೆ.

5. ಇ ವಾಹನ ಡೇಟಾಬೇಸ್‌:
ಗಲಭೆಕೋರರು ಬೆಂಕಿ ಹಚ್ಚುವ ಮೊದಲು ವಾಹನದ ಮಾಲೀಕರು ಯಾರು ಎಂಬುದನ್ನು ಇ ವಾಹನ ಪೋರ್ಟಲ್‌ಗೆ ಹೋಗಿ ತಿಳಿಯುವ ಪ್ರಯತ್ನ ಮಾಡಿ ಬಳಿಕ ಇತರರಿಗೆ ಅದನ್ನು ಮೆಸೇಜ್‌ ಮಾಡಿದ್ದರು. ಗಲಭೆಯ ಸಂದರ್ಭದಲ್ಲಿ ಯಾರೆಲ್ಲ ವಾಹನ ಸಂಖ್ಯೆಯನ್ನು ಇಂಟರ್‌ನೆಟ್‌ ಮೂಲಕ ಪರಿಶೀಲನೆ ನಡೆಸಿದ್ದಾರೋ ಆ ಡೇಟಾ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.

6. ಮೊಬೈಲ್‌ ಫಾರೆನ್ಸಿಕ್ಸ್‌:
ಗಲಭೆಯ ವೇಳೆ ಭಾರೀ ಸಂಖ್ಯೆಯ ಡೇಟಾ ಮೊಬೈಲ್‌ ಮೂಲಕ ಹರಿದಾಡಿದೆ. ವಶಕ್ಕೆ ಪಡೆದ ಜನರ ಫೋನ್‌ಗಳನ್ನು ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ವಾಯ್ಸ್‌ ರೆಕಾರ್ಡಿಂಗ್‌, ಫೋಟೋ ಇತ್ಯಾದಿ ಮಾಹಿತಿಗಳನ್ನು ರಿಟ್ರೀವ್‌ ಮಾಡುವ ಮೂಲಕ ತನಿಖೆ ಮಾಡಲಾಗಿದೆ.

7. ಡಂಪ್‌ ಡೇಟಾ ಅನಾಲಿಸಿಸ್‌:
ಮೊಬೈಲ್‌ ಕರೆ, ಮೆಸೇಜ್‌ ಮಾಡದೇ ಇದ್ದರೂ ಗಲಭೆಕೋರರ ಮೊಬೈಲ್‌ಗಳು ಆನ್‌ ಆಗಿತ್ತು. ಗಲಭೆ ನಡೆದ ಸ್ಥಳಗಳಲ್ಲಿ ಸಕ್ರೀಯವಾಗಿದ್ದ ಫೋನ್‌ ನಂಬರ್‌ಗಳನ್ನು ಟವರ್‌ ಮೂಲಕ ಕಲೆ ಹಾಕಲಾಗಿತ್ತು. ಒಟ್ಟು 10 ಸಾವಿರ ಮೊಬೈಲ್‌ ನಂಬರ್‌ಗಳು ಗಲಭೆಯ ವೇಳೆ ಸಕ್ರೀಯವಾಗಿತ್ತು ಎಂಬ ಅಂಶ ಪೊಲೀಸ್‌ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *