ವಲಸೆ ಕಾರ್ಮಿಕರ ಸ್ಥಳಾಂತರ – ಮುಂದುವರಿದ ‘ಕೈ-ಕಮಲ’ ತಿಕ್ಕಾಟ

Public TV
1 Min Read

– ಸಾವಿರ ಬಸ್ಸುಗಳಿಗೆ ಅವಕಾಶ ನೀಡದ ಯುಪಿ ಸರ್ಕಾರ
– ಕಾಂಗ್ರೆಸ್‍ನಿಂದ 4 ಕೋಟಿ 80 ಲಕ್ಷ ಖರ್ಚು

ನವದೆಹಲಿ: ವಲಸೆ ಕಾರ್ಮಿಕರ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ತಿಕ್ಕಾಟ ಮುಂದುವರಿದಿದೆ. ವಲಸೆ ಕಾರ್ಮಿಕರ ಕರೆತರಲು ಕಾಂಗ್ರೆಸ್ ನಿಯೋಜಿಸಿರುವ 1,000 ಬಸ್ಸುಗಳಿಗೆ ಉತ್ತರ ಪ್ರದೇಶ ಸರ್ಕಾರ ಪರವಾನಿಗೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಗಡಿ ಭಾಗದಲ್ಲಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಯುಪಿ ಸರ್ಕಾರ ಕೂಡಾ ಒಪ್ಪಿಗೆ ಸೂಚಿಸಿತ್ತು, ಆದರೆ ಇಂದು ಗಡಿ ಭಾಗದಲ್ಲಿ ಮಾತ್ರ ಉತ್ತರಪ್ರದೇಶ ಪೋಲಿಸರು ಬಸ್ಸುಗಳಿಗೆ ದಾಖಲೆಗಳಿಲ್ಲದ ಕಾರಣ ಗಡಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ.

ಬಸ್ಸುಗಳಿಗೆ ಅನುಮತಿ ನೀಡಿ ಎಂದು ಗಡಿಭಾಗದಲ್ಲಿ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ಎಳೆದೊಯ್ದು ಘಟನೆಯೂ ನಡೆಯಿತು. ಈ ಬಗ್ಗೆಯೂ ಪ್ರಿಯಾಂಕಾ ಗಾಂಧಿಯ ಕಾರ್ಯದರ್ಶಿ ಸಂದೀಪ್ ಸಿಂಗ್ ಖಂಡಿಸಿದ್ದಾರೆ. ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಉತ್ತರಪ್ರದೇಶ ಸರ್ಕಾರದ ಧೋರಣೆಗೆ ಎಐಸಿಸಿ ಕಾರ್ಯದರ್ಶಿ ರೋಹಿತ್ ಚೌದ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬಸ್‍ವೊಂದಕ್ಕೆ 16 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಗಡಿ ದಾಟಲಾಗದೇ 1,000 ಬಸ್ಸುಗಳು ನಿಂತಲ್ಲೇ ನಿಂತಿದ್ದು, ಕಾಂಗ್ರೆಸ್ ಈವರೆಗೂ 4 ಕೋಟಿ 80 ಲಕ್ಷ ಹಣ ಖರ್ಚು ಮಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಕಾಂಗ್ರೆಸ್ ಜನರಿಗೆ ಆಹಾರ ಮತ್ತು ಬಸ್ಸುಗಳ ವ್ಯವಸ್ಥೆ ಮಾಡುತ್ತಿದೆ. ಇದನ್ನು ಎಲ್ಲಾ ಸರ್ಕಾರಗಳು ಸ್ವಾಗತಿಸಬೇಕು ಮತ್ತು ಗಡಿಯಲ್ಲಿ ಅನುಮತಿಸಬೇಕು, ಅದನ್ನು ಬಿಟ್ಟು ನಾಯಕರನ್ನು ಬಂಧಿಸುವ ಕೀಳು ಮಟ್ಟದ ರಾಜಕೀಯ ಮಾಡಬಾರದು ಎಂದು ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಯುಪಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *